ದೆಹಲಿಯ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಫ್ತಾಬ್ ಪೂನಾವಾಲಾಗೆ ಇಂದು ಮತ್ತೊಂದು ಸುತ್ತಿನ ಸುಳ್ಳು ಪತ್ತೆ ಪರೀಕ್ಷೆ ನಡೆಯಲಿದೆ.
ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆಫ್ತಾಬ್ ಪೂನಾವಾಲಾನನ್ನು ಈಗಾಗಲೇ ಒಂದು ಸಲ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೆಲ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ದೊರೆಯದ ಕಾರಣ ನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇಂದು ಮತ್ತೊಂದು ಸುತ್ತಿನ ಪರೀಕ್ಷೆ ನಡೆಯಲಿದೆ.
ಸುಳ್ಳು ಪತ್ತೆ ಪರೀಕ್ಷೆ ಸೋಮವಾರ ಮುಕ್ತಾಯಗೊಂಡರೆ ಸೋಮವಾರ ಅಥವಾ ಮಂಗಳವಾರ ಅಫ್ತಾಬ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಯೋಗಾಲಯದ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ಮಾತನಾಡಿ, ವಾರಾಂತ್ಯದಲ್ಲಿ ಕೂಡ ಪ್ರಯೋಗಾಲಯ ಪರೀಕ್ಷೆಗಾಗಿ ತೆರೆದಿತ್ತು. ಸೋಮವಾರ ಪರೀಕ್ಷೆಗಾಗಿ ಆಫ್ತಾಬ್‌ನನ್ನು ಪ್ರಯೋಗಾಲಯಕ್ಕೆ ಕರೆ ತರಲು ಅನುಮತಿ ಸಿಕ್ಕಿರುವುದಾಗಿ ತನಿಖಾ ತಂಡ ಖಚಿತಪಡಿಸಿದೆ. ಮಂಪರು ಪರೀಕ್ಷೆಗೆ ಕೂಡ ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ.
ಈಗಾಗಲೇ ಪೂನಾವಾಲಾನನ್ನು ಪೊಲೀಸರು ಕೆಲ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಆದಾಗ್ಯೂ ಆತನಿಂದ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಇನ್ನಷ್ಟು ಪರೀಕ್ಷೆ ಅನಿವಾರ್ಯ ಎಂದು ಮೂಲಗಳು ಹೇಳಿವೆ.