ಚಿಕ್ಕಂಕನಹಳ್ಳಿ, ಹೂತಗೆರೆ ಅಂಚೆ, ಆತಗೂರು ಹೋಬಳಿ, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.
ಹಿಮಾಲಯಾಭಂ ವೃಷಭಂ ತೀಕ್ಷ್ಯಶೃಂಗಂ ತ್ರಿಲೋಚನಮ್ |
ಸರ್ವಾಭರಣ ಸಂದೀಪ್ತಂ ಸಾಕ್ಷಾಚ್ಛಂದಃಸ್ವರೂಪಿಣಮ್ |
ಶ್ರೀ ನಂದಿ ಬಸವೇಶ್ವರನ ಒಂದು ಪುಟ್ಟ ಗ್ರಾಮದ ಒಂದು ಅರಣ್ಯ ಪ್ರದೇಶದಲ್ಲಿ ನೆಲೆಸಿರುತ್ತಾನೆ. ಮೂಲ ಉದ್ಭವ ಮೂರ್ತಿಯಾಗಿದ್ದು, ಮೈಸೂರಿನ ಮಹಾರಾಜರ ಕಾಲದಲ್ಲಿ ಶ್ರೀ ನಂದೀಶ್ವರನು ಉದ್ಭವವಾಗಿರುವುದು ತದನಂತರದಲ್ಲಿ ಮಹಾರಾಜರು ಇಲ್ಲಿ ಬಂದು ಪೂಜೆ ಸಲ್ಲಿಸಿದ್ದಾರೆ ಎಂದು ಪ್ರತೀತಿಯಿದೆ.
ಪ್ರಾರಂಭದಲ್ಲಿ ನಂದಿಯಿಂದ ಬಂದು ಸ್ವಾಮಿ ಅವರು ಇಲ್ಲಿ ನೆಲೆಸಿದ್ದಾರೆ ಎಂಬ ಐತಿಹ್ಯವಿದೆ. ನಂದಿಯಲ್ಲಿ ಇವರು ನೆಲೆಸಿರುವಂತಹ ಸಂದರ್ಭದಲ್ಲಿ ಮೊಘಲರ ಆಳ್ವಿಕೆ ಸಮಯದಲ್ಲಿ ಅನೇಕರ ಅಟ್ಟಹಾಸ, ಅನೀತಿ, ಅಪಚಾರ ತುಂಬಿಕೊಂಡು ಊರಿನಲ್ಲಿ ಸ್ವಾಮಿಯವರಿಗೆ ಇರಲು ಸಾಧ್ಯವಾಗದೆ ಜಿಜ್ಞಾಸೆ ಉಂಟಾಗುತ್ತದೆ. ಬೇರೆ ಎಲ್ಲಿ ಹೋಗಬೇಕು ಎಂಬ ಮನಸ್ಸಿನಲ್ಲಿ ಪ್ರಶ್ನೆ ಬರುತ್ತದೆ. ಈ ಸಂದರ್ಭದಲ್ಲಿ ಅವರು ಅರಸುತ್ತ ಹೊರಟಾಗ ಮಲೆ ಮಹದೇಶ್ವರನು ಎದುರಾಗುತ್ತಾನೆ. ಆಗ ಬಸವೇಶ್ವರನವರನ್ನು ಹೋಗಿ ಕೇಳುತ್ತಾರೆ. ಆಗ ಮಲೆ ಮಹದೇಶ್ವರ ಸ್ವಾಮಿಯವರು ನಂದಿ ಬಸವಣ್ಣ ನೀನು ಕದಂಬ ನಂದಿಯ ತಟದಲ್ಲಿ ಒಂದು ಪ್ರಶಾಂತವಾದ ಸ್ಥಳ ಇದೆ ಅಲ್ಲಿ ನಲೆಸು ಎಂದು ಆ ಸ್ಥಳದಲ್ಲಿ ಸೂಚಿಸುತ್ತಾರೆ. ಅವರ ಅಪ್ಪಣೆ ಪಡೆದು ನಂದೀಶ್ವರರು ಇಲ್ಲಿ ಉದ್ಧವರಾಗಿರುತ್ತಾರೆ. ಆ ಸಮಯದಲ್ಲಿ ನಡೆದ ಒಂದು ಘಟನೆ ಕೊರಟಗೆರೆ, ತುಮಕೂರು ಆ ಭಾಗದಿಂದ ಚಾಮರಾಜನಗರ, ಮಂಡ್ಯ, ಮೈಸೂರು ಈ ಭಾಗಕ್ಕೆ ಶೆಟ್ಟರು ವ್ಯಾಪಾರಿಗಳು ವ್ಯಾಪಾರಕ್ಕೆ ಹೋಗುತ್ತಿದ್ದರು. ಇದು ದಾರಿ ಮಧ್ಯೆ ಇರುವ ಸ್ಥಳ ಅವರು ಬಂಡಿಯಲ್ಲಿ ಸಾಗುವಾಗ ರಾತ್ರಿ ಸಮಯವಾಗುತ್ತದೆ. ಅವರು ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಅಲ್ಲೇ ಪ್ರಶಾಂತ ಜಗದಲ್ಲಿ ಉಳಿದು ರಾತ್ರಿ ಕಳೆದು ಮುಂದೆ ಹೋಗಬೇಕಾಗಿ ಬರುತ್ತದೆ. ಬೇರೆ ದಾರಿ ಇಲ್ಲದೆ ಅವರು ಉಳಿಯಬೇಕಾಗುತ್ತದೆ.
ಅವರೆಲ್ಲರೂ ರಾತ್ರಿ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಸ್ವಾಮಿಯವರು ಅಲ್ಲಿ ಉದ್ಭವ ಆಗಿರುತ್ತಾರೆ. ಆದರೆ ಅವರಿಗೆ ಅದು ತಿಳಿಯುವುದಿಲ್ಲ. ಅದರ ಪಕ್ಕದಲ್ಲಿ ಎರಡು ಕಲ್ಲುಗಳನ್ನು ಇಟ್ಟು ಒಲೆ ಹಚ್ಚಿ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಎಷ್ಟು ಹೊತ್ತಾದರೂ ಅನ್ನ ಬೆಯುವುದಿಲ್ಲ. ಬೇರೆ ಕಡೆಗೆ ಇಟ್ಟಿದ ಓಲೆಗಳಲ್ಲಿ ಅಡುಗೆ ಆಗಿರುತ್ತದೆ. ಅವರು ಊಟ ಮಾಡಿ ರಾತ್ರಿ ಮಲಗುತ್ತಾರೆ. ಸುಮಾರು ಎರಡು ಗಂಟೆ ಸಂದರ್ಭದಲ್ಲಿ ಕುಟುಂಬದ ಯಜಮಾನನಿಗೆ ಕನಸಿನಲ್ಲಿ ಶ್ರೀಸ್ವಾಮಿಯವರು ನಾನು ನಂದಿ ಬಸವಣ್ಣ ಇಲ್ಲಿ ಉದ್ಭವವಾಗಿದ್ದೇನೆ, ನಿಮಗೆ ಅರಿವಿಲ್ಲದೆ ನೀವು ಒಲೆ ಹಚ್ಚಿ ಅಡುಗೆ ಮಾಡಿದ್ದೀರಿ, ಮುಂಜಾನೆ ಅದನ್ನು ಸರಿಪಡಿಸಿ ನನ್ನನ್ನು ಪೂಜೆ ಮಾಡಬೇಕು ಎಂದು ಹೇಳುತ್ತಾರೆ.
ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಒಂದು ಕಲ್ಲಿನ ಮೇಲೆ ಪುಟ್ಟ ನಂದಿ ಕುಳಿತಿರುವ ಸುಂದರವಾದ ಮೂರ್ತಿ ಗೋಚರಿಸುತ್ತದೆ. ಅವರಿಗೆ ತಪ್ಪಿನ ಅರಿವಾಗಿ ನಂದಿ ಬಸವೇಶ್ವರರಲ್ಲಿ ತಪ್ಪಾಯ್ತು ಎಂದು ಭಿನ್ನಾವಿಸಿಕೊಂಡು ಪೂಜೆ ಸಲ್ಲಿಸಿ ಹೋಗುತ್ತಾರೆ.
ಅಂದಿನಿಂದ ಅವರು ವ್ಯಾಪಾರಕ್ಕೆ ಹೋಗಬೇಕಾದರೆ, ಬರಬೇಕಾದರೆ ಪೂಜೆ ಮಾಡಿಕೊಂಡು ಹೋಗುತ್ತಿದ್ದರು. ಅದಾದ ಆರು ತಿಂಗಳ ನಂತರ ಮೈಸೂರಿನ ಅರಮನೆಗೆ ವ್ಯಾಪಾರಕ್ಕೆ ಹೋಗುತ್ತಾರೆ. ಅಲ್ಲಿ ಅರಮನೆಯಲ್ಲಿ ರಾಜ ಭಟ್ಟರ ಜೊತೆ ಅವರು ಹೇಳುತ್ತಾರೆ. ಈ ವಿಚಾರ ಅರಮನೆಯ ಮಹಾರಾಜರಿಗೆ ತಲುಪುತ್ತದೆ. ಮಹಾರಾಜರು ದಿಗ್ಭ್ರಾಂತರಾಗಿ ಆ ಕ್ಷೇತ್ರವನ್ನು ನೋಡಬೇಕೆಂದು ಸೈನ್ಯ ಸಮೇತರಾಗಿ ಹೋಗುತ್ತಾರೆ. ಮಹಾರಾಜರಿಗೆ ಮೂರ್ತಿಯನ್ನು ನೋಡಿ ಬಹಳ ಇಷ್ಟವಾಗುತ್ತದೆ. ಇದನ್ನು ಏಕೆ ಇಲ್ಲಿ ಬಿಡಬೇಕು ಎಂದು ಅರಮನೆಗೆ ತೆಗೆದುಕೊಂಡು ಹೋಗಿ, ಅಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸೋಣ ಎಂದು ಸಿದ್ದರಾಗುತ್ತಾರೆ. ಎಷ್ಟೇ ಪ್ರಯತ್ನ ಪಡಿಸಿದರು ಸ್ವಾಮಿ ಅಲ್ಲಾಡುವುದಿಲ್ಲ. ಆಗ ಆನೆಗಳ ಕೈಯಲ್ಲಿ ಸರಪಣಿ ಹಾಕಿ ಎಳೆಸಿದರು ಎಂಬ ಪ್ರತಿತಿಯಿದೆ. ಇದಕ್ಕೆ ಯಾವ ದಾಖಲೆಗಳಲ್ಲಿ ಪುರಾವೆಗಳಾಗಲೀ ಇರುವುದಿಲ್ಲ. ಇದು ತಲೆತಲಾಂತರದಿಂದ ಹಿರಿಯರು ಹೇಳಿದ ಸಂಗತಿ ಬಾಯಿಂದ ಬಾಯಿಗೆ ಬಂದ ಕಥೆ.
ಆನೆಗಳ ಕೈಯಲ್ಲಿ ಸರಪಳಿಯಿಂದ ಎಳೆಸಿದಾಗ ಶ್ರೀ ಸ್ವಾಮಿಯವರು ಜೋರಾಗಿ ಗುಟುರು ಕೂಗಿ ಹಿಂದೆ ಸರಿಯುತ್ತಾರೆ. ಈಗಲೂ ಮೂರ್ತಿಯನ್ನು ನೋಡಿದಾಗ ಹಿಂದೆ ಬಾಗಿದ ಹಾಗೆ ಕಾಣುತ್ತದೆ.
ರಾಜ್ಯ ಎಷ್ಟೇ ಪ್ರಯತ್ನ ಪಟ್ಟರು ನಂದಿ ಬಸವೇಶ್ವರರು ಅಲ್ಲಿಂದ ಬರುವುದಿಲ್ಲ. ನಂತರ ಒಂದು ಶರೀರವಾಣಿ ನುಡಿಯುತ್ತದೆ. ನಾನು ಇಲ್ಲಿ ನೆಲೆಗೊಂಡು ರೈತಾಪಿ ವರ್ಗದ, ಸಾಮಾನ್ಯ ಜನಗಳ ಕಷ್ಟವನ್ನು ನೆರವೇರಿಸಬೇಕು ಎಂದು ನೆಲೆಸಿದ್ದೇನೆ ನನಗೆ ಯಾವುದೇ ರೀತಿ ಆಡಂಬರ ಬೇಡ ನೀವು ಯಾವುದೇ ಪೂಜಿಸಲ್ಲಿಸುವುದಾದರೂ ಇಲ್ಲಿಂದಲೇ ಮಾಡು, ಇಲ್ಲಿಂದ ನನ್ನನ್ನು ಕದಲಿಸುವ ಪ್ರಯತ್ನ ಮಾಡಬೇಡ ಎಂದು ಹೇಳುತ್ತಾರೆ.
ಆ ತಕ್ಷಣವೇ ಅದನ್ನ ನಿಲ್ಲಿಸಿ ಮಹಾರಾಜರು ಪೂಜಿ ಸಲ್ಲಿಸಿ ಹೋಗುತ್ತಾರೆ. ಇವತ್ತಿಗೂ ಸಹ ಅರಮನೆಯಿಂದ ಬಂದು ಪೂಜೆ ಮಾಡಿಕೊಂಡು ಹೋಗುವ ಪ್ರತಿತಿಯಿದೆ. ಇಲ್ಲಿನ ಹೆಚ್ಚಿನ ರೈತಾಪಿ ವರ್ಗದವರು ಹಸುಗಳಿಗೆ ಜಾನುವಾರಗಳಿಗೆ ಯಾವುದೇ ರೋಗರುಜೀನಗಳು ಇದ್ದರೂ ಸ್ವಾಮಿಯವರ ಅಭಿಷೇಕ ತೀರ್ಥ ಮಾಡಿದರೆ ಸಾಕು ಅದು ಬೇಗ ಗುಣವಾಗುತ್ತದೆ.
ಮನೆಯಲ್ಲಿ ಕೂತು ಹರಕೆಯ ಮುಖಾಂತರ ಕಷ್ಟ ಪರಿಹಾರ ಕೂಡ ಮಾಡಿಕೊಳ್ಳುತ್ತಾರೆ. ಸ್ವಾಮಿಗೆ ಪ್ರಿಯವಾದ ಪಂಚಾಮೃತ ಅಭಿಷೇಕ, ತುಪ್ಪದ ಕಜ್ಜಾಯ ನೈವೇದ್ಯ ಮಾಡಿಸುತ್ತಾರೆ. ಪ್ರತಿದಿನ ಇಲ್ಲಿ ಪಂಚಾಮೃತ ಅಭಿಷೇಕ ನಡೆಯುತ್ತದೆ. ಸೋಮವಾರ, ಶುಕ್ರವಾರ ಭಾನುವಾರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಮತ್ತು ಮಕ್ಕಳಿಲ್ಲದವರು ಸ್ವಾಮಿ ಹತ್ತಿರ ಸಂಕಲ್ಪ ಮಾಡಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಿ ಸಂತಾನ ಭಾಗ್ಯ ಪಡೆದಿದ್ದಾರೆ.
ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ದೀಪೋತ್ಸವ ಅಭಿಷೇಕಗಳು ನಡೆಯುತ್ತದೆ. ಈ ದೇವಸ್ಥಾನಕ್ಕೆ ಜೀವಂತವಾದ ಬಸಪ್ಪನನ್ನು ರಾಮನಗರದ ನಿವಾಸಿ ರವಿ ಎಂಬುವವರು ಕೊಟ್ಟಿದ್ದಾರೆ. ಅದು ಗ್ರಾಮಸ್ಥರ ಒಡೆತನದಲ್ಲಿರುತ್ತದೆ. ಭಕ್ತಾದಿಗಳಿಗೆ ಆಶೀರ್ವಾದ ಮಾಡುವ ಬಸವಪ್ಪನ ವಿಶೇಷವಾಗಿ ಸೋಮವಾರ ಕ್ಷೇತ್ರದಲ್ಲಿರುತ್ತದೆ.
ಪ್ರತಿವರ್ಷ ಜಾತ್ರೆಯಲ್ಲಿ ಉತ್ಸವ ನಡೆಯುತ್ತದೆ ಇಲ್ಲಿನ ಉಯ್ಯಾಲೆ ಕಂಬ ಬಹಳ ಶಿಥಿಲಗೊಂಡ ಬಹಳ ವರ್ಷಗಳಿಂದ ಉಯ್ಯಾಲೆ ಉತ್ಸವ ನಿಂತು ಹೋಗಿತ್ತು. ಬೆಂಗಳೂರಿನವರಾದ ಶ್ರೀ ನಾರಾಯಣ ರೆಡ್ಡಿ ಎಂಬ ಭಕ್ತಾದಿಗಳು ಉಯ್ಯಾಲೆ ಕಂಬವನ್ನು ನಿರ್ಮಾಣ ಮಾಡಿದ ನಂತರ ಶ್ರೀ ನಂದಿ ಬಸವೇಶ್ವರನಿಗೆ ಪ್ರತಿವರ್ಷ ಉಯ್ಯಾಲೆ ಉತ್ಸಾಹ ನಡೆಸುತ್ತಿದ್ದಾರೆ. ದೇವಾಲಯ ಪಕ್ಕದಲ್ಲಿ ಕಲ್ಯಾಣ ಮಂಟಪ ಇದೆ. ಮದುವೆ ಮುಂಜಿ ಅನ್ನದಾಸೋಹ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ.
ಇಲ್ಲಿ ವಿಜಯದಶಮಿ ಎಂದು ಮೈಸೂರಿಗೆ ವಿಜೃಂಭಣೆಯಿಂದ ನಡೆಸುತ್ತಾರೋ ಹಾಗೆ ಇಲ್ಲೂ ಕೂಡ ಒಂಭತ್ತು ದಿನಗಳು ಸ್ವಾಮಿಯ ನಿಂತಿರುವ ವಿಶೇಷವಾದ ಮೂರ್ತಿಯನ್ನು ಪಟ್ಟದಲ್ಲಿ ಕೂರಿಸಿ ವಿಜಯದಶಮಿಯ ದಿನ ಬನ್ನಿಮಂಟಪಕ್ಕೆ ತೆಗೆದುಕೊಂಡು ಹೋಗಿ, ಬನ್ನಿ ಕಡಿದು ಬರುವಂತಹ ಪ್ರತೀತಿ ಎಂದಿಗೂ ನಡೆಯುತ್ತದೆ.
ಇಲ್ಲಿ ಭಾನುವಾರ, ಶುಕ್ರವಾರ, ಸೋಮವಾರದಂದು ದೇವಾಲಯ ಬಾಗಿಲು ತೆರೆದಿರುತ್ತದೆ. ಮತ್ತು ಈ ದೇವಾಲಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುತ್ತದೆ.