ಮೈಸೂರು: ಇದೇ ನನ್ನ ಕೊನೆಯ ಚುನಾವಣೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಉತ್ತರಾಧಿಕಾರಿಯನ್ನಾಗಿ ಮೊಮ್ಮಗ ಧವನ್ ರಾಕೇಶ್ ಅವರ ಹೆಸರನ್ನು ಘೋಷಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಂಜನಗೂಡಿನ ಗೋಳೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಚುನಾವಣೆ ನನ್ನ ಕೊನೆಯ ಚುನಾವಣೆ. ಮುಂದಿನ ದಿನಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ. ಬಳಿಕ ಧವನ್ ರಾಕೇಶ್ ರಾಜಕೀಯಕ್ಕೆ ಬರುತ್ತಾರೆ ಎಂದು ಘೋಷಿಸಿದರು.
ಧವನ್ ರಾಕೇಶ್ ಗೆ ಈಗ 17ವರ್ಷ, ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರುತ್ತಾನೆ. ನನ್ನ ಪುತ್ರ ರಾಕೇಶ್ ವರುಣ ಮತ್ತು ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಿದ್ದ. ಅವನಷ್ಟೇ ಪ್ರೀತಿಯನ್ನು ಮಗನ ಮೇಲೂ ಜನತೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಬಯಸಿ ವರುಣಾದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿಯವರು ವರುಣ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವರಿಗೆ ಅವಕಾಶ ನೀಡಿಲ್ಲ. ಬೆಂಗಳೂರಿನಿಂದ ವಿ ಸೋಮಣ್ಣ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಬಿಜೆಪಿ – ಜೆಡಿಎಸ್ ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಜೆಡಿಎಸ್ನವರು ಡಾ ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ ನನ್ನನ್ನು ದೊಡ್ಡ ಅಂತರದಲ್ಲಿ ನೀವು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆ. ಬಿಜೆಪಿಯವರು ಕುತಂತ್ರ ಮಾಡುವುದರಲ್ಲಿ ನಿಸ್ಸೀಮರು. ಬಿಜೆಪಿ, ಜೆಡಿಎಸ್ ನವರು ನನ್ನನ್ನು ಸೋಲಿಸಲೇಬೇಕು ಅಂತ ಹಣದ ಹೊಳೆ ಹರಿಸಬಹುದು. ಎಷ್ಟೇ ಕೋಟಿ ಖರ್ಚು ಮಾಡಲಿ, ಎಷ್ಟೇ ಕುತಂತ್ರ, ಹುನ್ನಾರ ಮಾಡಲಿ. ಚಾಮುಂಡೇಶ್ವರಿ ಕ್ಷೇತ್ರದ ಜನ ಇದ್ಯಾವುದಕ್ಕೂ ಸೊಪ್ಪು ಹಾಕಲ್ಲ ಎಂದರು. ಬಳಿಕ ವರುಣಾ ಕ್ಷೇತ್ರದ ಜನರು ಎಂದು ತಮ್ಮ ಮಾತನ್ನು ಸರಿಪಡಿಸಿಕೊಂಡರು.
ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸೂರ್ಯ ಚಂದ್ರರಿರುವಷ್ಟೇ ಸತ್ಯ. ವಿ ಸೋಮಣ್ಣ, ಬಸವರಾಜ ಬೊಮ್ಮಾಯಿ ಇಲ್ಲಿಗೆ ಬಂದು ಹೋಗಿದ್ದಾರೆ. ವರುಣ ತಾಲೂಕು ಮಾಡುವುದಾಗಿ ಹೇಳಿದ್ದಾರೆ. ನಾಲ್ಕು ವರ್ಷ ನೀವೇ ಅಧಿಕಾರದಲ್ಲಿದ್ದೀರಿ. ಯಾಕೆ ವರುಣಾವನ್ನು ತಾಲೂಕನ್ನಾಗಿ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.