ಮನೆ ರಾಜಕೀಯ ಸಿದ್ದರಾಮಯ್ಯವರೇ ನೀವು ಮನುಷ್ಯರೋ ಅಥವಾ ಕಾಡು ಪ್ರಾಣಿಯೋ? : ಸಚಿವ ಶ್ರೀರಾಮುಲು

ಸಿದ್ದರಾಮಯ್ಯವರೇ ನೀವು ಮನುಷ್ಯರೋ ಅಥವಾ ಕಾಡು ಪ್ರಾಣಿಯೋ? : ಸಚಿವ ಶ್ರೀರಾಮುಲು

0

ಬೆಂಗಳೂರು:  ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ ಎಂಬ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ, ಸಾರಿಗೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ  ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,  ಸಿದ್ದರಾಮಯ್ಯನವರೇ ನಿಮ್ಮನ್ನು ನೋಡಿ ಬಿಜೆಪಿ ಹೆದರಿಕೊಳ್ಳಲು ನೀವು ಕಾಡುಪ್ರಾಣಿಯೋ ಅಥವಾ ಮನುಷ್ಯರೋ?  ಏಕೆಂದರೆ ನಾಗರಿಕ ಸಮಾಜದಲ್ಲಿ ಜನರು ಕಾಡುಮೃಗಗಳನ್ನು ಮಾತ್ರ ನೋಡಿ ಹೆದರುತ್ತಾರೆ ಹೊರತು ಮನುಷ್ಯರನ್ನು ನೋಡಿ ಅಲ್ಲ ಎಂಬುದು ನಿಮಗೆ ತಿಳಿಯದಿರುವುದು ದುರ್ದೈವವೇ  ಸರಿ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮನ್ನು ನೋಡಿ ಹೆದರುವ ಇಲ್ಲವೇ ಬೆದರುವ ಅಗತ್ಯ ಖಂಡಿತವಾಗಿಯೂ ಬಿಜೆಪಿಗೆ ಅಂತಹ ದುಸ್ಥಿತಿ ಬಂದಿಲ್ಲ. ಎಂತೆಂಥವರನ್ನೇ ಎದುರಿಸಿರುವಾಗ ಅಧಿಕಾರದ ಆಸೆಗಾಗಿ  ಬೆಳೆಸಿದ ಪಕ್ಷಕ್ಕೆ ಚೂರಿ ಹಾಕಿ ಬಂದ ನೀವು ನಮಗೆ ಲೆಕ್ಕಕೂ ಇಲ್ಲ. ಬುಕ್ಕಕ್ಕೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

2 ಸ್ಥಾನದಿಂದ  ಆರಂಭವಾದ ಬಿಜೆಪಿ ಜೈತ್ರಾ ಯಾತ್ರೆ ಇಂದು 303 ಸ್ಥಾನಗಳವರೆಗೆ  ಬಂದಿದೆ. ನಿಮ್ಮಂತಹ ಪಾಳೆಗಾರರನ್ನು ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ.ಬಿಜೆಪಿ ಕೆಣಕಿದವರು ಎಂತಹ ಹೀನಾಯ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನನ್ನನ್ನು ನೋಡಿದರೆ ಬಿಜೆಪಿಯವರಿಗೆ ಭಯ ಎಂದು ಹೇಳಿಕೊಳ್ಳುವ ನಿಮಗೆ ನಾಚಿಕೆಯಾಗಬೇಕು. 5 ವರ್ಷ ಮುಖ್ಯಮಂತ್ರಿಯಾಗಿದ್ದ ನಿಮಗೆ ಈಗ ಹೇಳಿಕೊಳ್ಳಲು ಒಂದೇ ಒಂದು ಕ್ಷೇತ್ರವಿಲ್ಲ. ಹೈಕಮಂಡ್ ಎದುರು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವೀರಾವೇಷದ ಮಾತುಗಳನ್ನು ಆಡುತ್ತಿದ್ದೀರಿ ಎಂದು ಕುಹುಕವಾಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ 132 ಸ್ಥಾನದಿಂದ 78 ಸ್ಥಾನಕ್ಕೆ  ಕಾಂಗ್ರೆಸ್ ಪಕ್ಷವನ್ನು ಕುಸಿಯುವಂತೆ ಮಾಡಿದ್ದು ನಿಮ್ಮ ಸಾಧನೆ. ಚಾಮುಂಡೇಶ್ವರಿಯಲ್ಲಿ 38 ಸಾವಿರ ಮತಗಳಲ್ಲಿ  ಹೀನಾಯ ಸೋಲು, ಬದಾಮಿಯಲ್ಲಿ ನನ್ನೆದುರು 1600 ಮತಗಳ ಅಂತರದಲ್ಲಿ ತಿಣಕಾಡಿ ಗೆದ್ದಿದ್ದು ನಿಮ್ಮ ತಾಕತ್ತು ಎಂದು ಟೀಕಿಸಿದ್ದಾರೆ.

ದಾವಣಗೆರೆಯ ಸಿದ್ದರಾಮೋತ್ಸವ ಜಯಂತಿಗೆ   ಬಿಜೆಪಿಯವರು  ಹೆದರಿದ್ದಾರೆ ಎಂಬ ನಿಮ್ಮ  ಹೇಳಿಕೆ ಬಾಲಿಷತನದಿಂದ ಕೂಡಿದೆ. ಇಂಥ ಹತ್ತು ಪಟ್ಟು ಜನರನ್ನು ಸೇರಿಸಿ ಸಮಾವೇಶ ನಡೆಸುವ ತಾಕತ್ತು ಬಿಜೆಪಿಗಿದೆ. ನಮ್ಮ ಕಾರ್ಯಕರ್ತರು ಬಿರಿಯಾನಿ, ಎಣ್ಣೆ, 500 ರೂ.ಗೆ ಬಂದು ಜೈ ಹುಲಿಯಾ ಎನ್ನುವವರಲ್ಲ ಎಂದು  ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಶುರುವಾಗಿದೆ ಎಂಬುದು ನಿಮ್ಮ ಭ್ರಮೆಯಷ್ಟೆ. ವಾಸ್ತವ ಚಿತ್ರಣವೇ ಬೇರೆ ಇದೆ. ನಿಜವಾಗಿ ಆರಂಭವಾಗಿರುವುದು ಕಾಂಗ್ರೆಸ್ ಅವಸಾನದ ದಿನಗಳು. ಹಾಸಿಗೆ ,ದಿಂಬು,ತಟ್ಟೆ, ಲೋಟ , ಅನ್ನಭಾಗ್ಯ, ಲ್ಯಾಪ್ ಟಾಪ್ , ಕಾಮಗಾರಿ ನಡೆಸದೇ, ಬಿಲ್ ಮಂಜೂರಾತಿ. ಈ ಬಿಲ್ವಿದ್ಯೆ  ನಿಮಗಲ್ಲದೆ ಬೇರೆಯವರಿಗೆ ಬರಲು ಸಾಧ್ಯವೇ? ಕರ್ನಾಟಕದ ಅಣ್ಣಾ ಹಜಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಮನೆಯೊಂದು ಮೂರು ಬಾಗಿಲು ಎಂಬತಾಗಿದ್ದರೂ ಬಿಜೆಪಿ ವಿರುದ್ಧ ನೀವು ಆರೋಪ ಮಾಡಿದಾಗ ನಾವು ಬಾಯಿ ಮಚ್ಚಿಕೊಂಡು ಸುಮ್ಮನಿರಲು ಸಾಧ್ಯವೆ? ಭಾರತ್ ಜೋಡೊದಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು ಖಾಲಿ ಕುರ್ಚಿಗೆ ಒಣ ಭಾಷಣ ಬಿಗಿಯುತ್ತಿರುವುದು  ಕಣ್ಣಿಗೆ ಕಾಣುತ್ತಿಲ್ಲವೇ?  ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ಕೊಟ್ಟಿದ್ದಾರೆ.

ಹೆಚ್ಚು ದಿನ ಬೇಡ.! ಕೆಲವೇ ದಿನಗಳಲ್ಲಿ ನಿಮ್ಮನ್ನು ಹಾಗೂ  ನಿಮ್ಮ ಪಟಲಾಂ ಅನ್ನು ಹೇಗೆ  ಕಾಂಗ್ರೆಸ್ ಒಳಗಿರುವವರು. ಮುಗಿಸುತ್ತಾರೆ ಕಾದು ನೋಡಿ.!ನಿಮ್ಮ ಹೋರಾಟ, ಚೀರಾಟ, ಒಣ ಪೌರುಷದ ಮಾತುಗಳು 2023ರ ಮೇ ತಿಂಗಳವರೆಗೆ ಮಾತ್ರ. ನಂತರ  ಸಿದ್ದರಾಮನ ಹುಂಡಿಯ ತೋಟದ ಮನೆಯೇ ಗತಿ ಎಂದು  ಸಚಿವ ಶ್ರೀರಾಮಲು ಲೇವಡಿ ಮಾಡಿದ್ದಾರೆ.