ಬೆಂಗಳೂರು(Bengaluru): ಪರಿಷ್ಕೃತ ಪಠ್ಯ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಇತಿಹಾಸ ತಿರುಚುತ್ತಿರುವ ಶಿಕ್ಷಣ ಸಮಿತಿಗೆ ಧಿಕ್ಕಾರ, ಪಠ್ಯಕ್ರಮ ಬದಲು ಮಾಡಲು ಹೊರಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ರೋಹಿತ್ ಚಕ್ರತಿರ್ಥರನ್ನು ಬಂಧಿಸಿ, ಸಂಘಪರಿವಾರವನ್ನು ಬೆಂಬಲಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಪರಿಷ್ಕೃತ ಪಠ್ಯ ಕ್ರಮವನ್ನು ರದ್ದುಗೊಳಿಸಿ, ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಬೃಹತ್ ಪ್ರತಿಭಟನೆಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಾರ್ವಜನಿಕರು, ಮಠಾಧೀಶರು, ಸಾಹಿತಿಗಳಿಂದ, ಶಿಕ್ಷಣ ತಜ್ಞರಿಂದ, ರಾಜಕಾರಣಿಗಳಿಂದ ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತವಾಯಿತು. ಅದಕ್ಕಾಗಿ ರೋಹಿತ್ ಚಕ್ರತೀರ್ಥರ ಸಮಿತಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆ ಆದ ಮೇಲೆ ಅವರು ಪರಿಷ್ಕರಿಸಿದ ಪಠ್ಯ ರದ್ದು ಮಾಡಬೇಕು. ಅದರಲ್ಲಿ ಇತಿಹಾಸ ತಿರುಚಲಾಗಿದ್ದು, ಮಕ್ಕಳಿಗೆ ಆ ಪಾಠವನ್ನು ಭೋದಿಸಬಾರದು. ಆರ್ಎಸ್ಎಸ್, ಕೇಸರಿಕರಣದ ವಿರುದ್ಧ ನಾವಿದ್ದೇವೆ. ಅವರು ಅಂಬೇಡ್ಕರ್, ಕನಕದಾಸರಿಗೆ, ಬಸವಣ್ಣ, ಕುವೆಂಪು ಸೇರಿದಂತೆ ದಾಸರು, ವಚನಕಾರರಿಗೆ ಅಪಮಾನ ಮಾಡಿದ್ದಾರೆ. ಮಕ್ಕಳ ಮನಸ್ಸಿಗೆ ವಿಷವುಣಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕೆಂಬ ಅಭಿಲಾಷೆ ಜೆಡಿಎಸ್ಗಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕೆಂದು ಹೇಳಿದರು.
ಹಿಂದೆ ನಾವು ದೇವೇಗೌಡರ ಗೆಲುವಿಗೆ ಬೆಂಬಲ ಕೊಟ್ಟಿದ್ದೆವು. ಈಗ ಅವರೇ ಬೆಂಬಲ ಕೊಡಲಿ ಎಂದು ಕೈಮುಗಿದು ಕೇಳಿಕೊಂಡರು. ಹಳೆಯದೆಲ್ಲ ಮರೆಯೋಣ, ಮಾತುಕತೆ ನಡೆಸೋಣ, ಉಳಿದದ್ದೆಲ್ಲ ಮುಂದೆ. ಈಗ ಜೆಡಿಎಸ್ ನವರೇ ನಮಗೆ ಬೆಂಬಲ ಕೊಡಲಿ ಎಂದರು.