ಶಿವಮೊಗ್ಗ(Shivamogga): ಸಿದ್ಧರಾಮಯ್ಯ ಕ್ಷೇತ್ರ ಸಿಗದೇ ಅಲೆಮಾರಿಯಾಗಿದ್ದಾರೆ. ಸಿಎಂ ಆಗಬೇಕೆಂಬ ವ್ಯಕ್ತಿಗೆ ಇಂಥ ಸ್ಥಿತಿ ಎದುರಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ಸಿದ್ಧರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಬಾದಾಮಿಯಲ್ಲೂ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಸಿದ್ಧರಾಮಯ್ಯ ಬೇರೆಯವರಿಗೆ ಮೋಸ ಮಾಡಿದ್ಧಾರೆ. ಪರಮೇಶ್ವರ್ ಗೆ ಅಧಿಕಾರ ಹಿಡಿಯಲು ಸಿದ್ಧರಾಮಯ್ಯ ಬಿಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗದಂತೆ ತಡೆದರು. ಈಗ ಡಿಕೆ ಶಿವಕುಮಾರ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಪರಮೇಶ್ವರ್ ಹಾಗೂ ಡಿಕೆಶಿಯೇ ಸಿದ್ಧರಾಮಯ್ಯರನ್ನ ಸೋಲಿಸುತ್ತಾರೆ. ಕಾಂಗ್ರೆಸ್ ನಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಬಿಟ್ಟವರನ್ನು ಮರಳಿ ಪಕ್ಷಕ್ಕೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಪಕ್ಷ ಬೆತ್ತಲೆ ಆಗಿದೆ ಅಂತಾ ಅವರೇ ಒಪ್ಪಿಕೊಂಡಾಗೆ ಆಯಿತು. ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂದಿದ್ದರು. ಎಂತಹ ದುಸ್ಥಿತಿ ಕಾಂಗ್ರೆಸ್’ಗೆ ಬಂದಿದೆ ಎನ್ನುವುದು ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದರು.