ಚಾಮರಾಜನಗರ: ಸಿದ್ದರಾಮಯ್ಯ ಅವರಿಗೆ ತತ್ವ ಸಿದ್ಧಾಂತ ಇಲ್ಲ. ಕೆಲವು ಕಡೆ ಪ್ರಚಾರದಲ್ಲಿ ಕಾಂಗ್ರೆಸ್ ಮುಗಿಸಿ, ಬಿಜೆಪಿ ಗೆಲ್ಲಿಸಿ ಎಂದು ಹೇಳುತ್ತಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ ಕುಮಾರಸ್ವಾಮಿ ಹರಿಹಾಯ್ದರು.
ಹನೂರು ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂ.ಆರ್ ಮಂಜುನಾಥ್ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಲು ಶನಿವಾರ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಗೆಲ್ಲಿಸಿ ತಪ್ಪು ಮಾಡಿದೆವು ಎಂದು ಹೇಳಿದ್ದಾರೆ. ಇವರದ್ದು ಹೊಂದಾಣಿಕೆ ರಾಜಕಾರಣ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕಾ? ಸಿದ್ದರಾಮಯ್ಯ ಅವರಿಗೆ ಯಾವ ಸಿದ್ದಾಂತ ಇದೆ? ಯಾವ ಸಿದ್ಧಾಂತ ಇಟ್ಟುಕೊಂಡಿದ್ದಾರೆ? ನಾನು ಅವರಿಂದ ತತ್ವ ಸಿದ್ದಾಂತ ಕಲಿಯಬೇಕಿಲ್ಲ. ಸಾರ್ವಜನಿಕರ ಕಷ್ಟ ಸುಖ ಏನು ಅಂತ ನಾನು ತಿಳಿದುಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಎರಡು ತಿಂಗಳಿಂದ ಬರುತ್ತಿರುವುದೆಲ್ಲ ಕೃತಕ ಸಮೀಕ್ಷೆಗಳು. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗೆ ಧಕ್ಕೆ ಮಾಡುತ್ತಿದ್ದಾರೆ. ಸಮೀಕ್ಷೆಗಳಲ್ಲಿ ಸತ್ಯಾಂಶವಿಲ್ಲ. ಈ ಸಮೀಕ್ಷೆಗಳೆಲ್ಲ ಮುಂದೆ ಉಲ್ಟಾ ಹೊಡೆಯಲಿವೆ. ರಾಷ್ಟ್ರೀಯ ಪಕ್ಷಗಳಿಗೆ ಪೂರ್ಣ ಬಹುಮತ ಎನ್ನುವುದು ಕೇವಲ ಕನಸು. ಸಮೀಕ್ಷೆ ಮಾಡಿರುವವರು ಆನಂದ ಪಡಲಿ. ಸಿದ್ದರಾಮಯ್ಯ ಇದ್ದಾಗ ಜೆಡಿಎಸ್ ಗೆ 58 ಬಂದಿರುವುದೇ ಹೆಚ್ಚು ಅಂತಿದ್ದಾರಲ್ಲ. ಅದೆಲ್ಲ ಮೀರಿ ಸ್ಪಷ್ಟ ಬಹುಮತ ಸಿಗುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ಇರುವ ಆರ್ಥಿಕ ಶಕ್ತಿ ನನಗೆ ಇದ್ದಿದ್ದರೆ 170ರಿಂದ 180 ಸೀಟು ಗೆಲ್ಲುತ್ತಿದ್ದೆ. ಹಣದ ಕೊರತೆಯಿಂದ ಗೆಲ್ಲುವ ಸ್ಥಾನಗಳು ಕಡಿಮೆ ಆಗಬಹುದು. ಆದರೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಗೆ ತತ್ವ ಸಿದ್ದಾಂತ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಲಿಂಗಾಯತ ಸಮಾಜದ ಬಗ್ಗೆ ಚರ್ಚೆ ಮಾಡಿ, ಈಗ ಕ್ಷಮಿಸಿ ಎಂದು ಹೇಳುತ್ತಿದ್ದಾರೆ.
ಇವರು ಜಾತ್ಯಾತೀತವಾದಿಯೇ? ದೇವೇಗೌಡರು ಕೊಟ್ಟ ಕೊಡುಗೆಯನ್ನು ಇವರಿಂದ ಕೊಡುವುದಕ್ಕೆ ಆಗುತ್ತದೆಯಾ? ಐದು ವರ್ಷ ಸಿಎಂ ಆಗಿದ್ದರಲ್ಲಾ, ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಲಿ ನೋಡೋಣ. ಇವರಿಗೆ ಯಾವ ತತ್ವ ಸಿದ್ದಾಂತಗಳು ಇಲ್ಲ. ಇವರಿಂದ ನಾನು ನಾನು ಕಲಿಯಬೇಕಿಲ್ಲ ಎಂದರು.
ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಮೋದಿ ರೋಡ್ ಶೋನಿಂದ ಏನು ಪ್ರಯೋಜನ? ಸಾರ್ವಜನಿಕರು, ವ್ಯಾಪಾರಿಗಳು, ಎರಡು ಹೊತ್ತಿನ ಊಟಕ್ಕೆ ಪರದಾಡುವವರು ಬೀದಿಗೆ ಬರುವಂತಿಲ್ಲ. ನೀಟ್ ಇದೆ. ಮಕ್ಕಳ ಮೇಲೆ ಏನು ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿ ಹೊರಗೆ ಬರಬೇಡಿ ಎಂದು ಹೇಳುತ್ತಾರೆ. ರೋಡ್ ಶೋ ಅಂದರೆ ಮೋದಿ ಮೋದಿ ಎಂದು ಕೂಗಾಡುವುದು ಅಷ್ಟೇ ತಾನೆ ಎಂದು ವ್ಯಂಗ್ಯವಾಡಿದರು.