ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾಗಿದೆ. ಹೀಗಿದ್ದರೂ ವಿರೋಧ ಪಕ್ಷಗಳು ಅದನ್ನು ಟೀಕಿಸುತ್ತಿರುವುದು ಕೇವಲ ಆಧಾರ ರಹಿತವಾದುದು ಎಂದು ನಗರ ಕಾಂಗ್ರೆಸ್ ಕಾನೂನು ವಿಭಾಗದ ಹಿರಿಯ ವಕೀಲರಾದ ಜೆ.ಎನ್. ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾವುದೇ ಬೇಧ ಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ಹಣಕಾಸಿನ ಅನುದಾನ ನೀಡುವ ಮೂಲಕ ಅಭಿವೃದ್ಧಿ ಯೋಜನೆ ನೀಡಿದ್ದಾರೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ ಕೆಲವರ ತುಷ್ಠೀಕರಣದ ಬಜೆಟ್ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ವಾಸ್ತವಾಗಿ ಈ ಟೀಕೆ ಸುಳ್ಳೆಂಬುದು ಜನರಿಗೆ ಅರಿವಿದೆ ಎಂದರು.
ಕಾಂಗ್ರೆಸ್ ಪಕ್ಷ ಜನ ಸಮುದಾಯದ ಏಳಿಗೆಯ ಸಾಮಾಜಿಕ ಕಾಳಜಿ, ಸಾಮಾಜಿಕ ಚಿಂತನೆಗಳ ವೇದಿಕೆ ಆಗಿದೆ. ಪಾರಂಪರಿಕ ಜನಾಂಗೀಯ ಭೇದ ತೊಡೆದು ಹಾಕಲು ಶ್ರಮಿಸುತ್ತಿದೆ. ಹೀಗಿರುವಾಗ ಅದನ್ನು ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ. ಸ್ಪಷ್ಟ ಬಹುಮತವಿಲ್ಲದೇ ತನ್ನ ಎರಡು ಪ್ರಮುಖ ಅಂಗ ಪಕ್ಷಗಳನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲಾಗಿದೆ. ಇದು ಜನಪರವಾಗಿಲ್ಲ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ವೈದ್ಯನಾಥನ್ ಉಪಸ್ಥಿತರಿದ್ದರು.
ಹಲಾಲ್ ಅರ್ಥವೇನು ತಿಳಿದುಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ ೧೬ನೇ ಬಜೆಟ್ ಅನ್ನು ಟೀಕಿಸುವ ಭರದಲ್ಲಿ ಮತ್ತು ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯದ ತುಷ್ಠೀಕರಣವಾಗಿದೆ ಎಂದು ಸುಳ್ಳನ್ನು ಬಿಂಬಿಸುವಲ್ಲಿ ಬಿಜೆಪಿ ಇದನ್ನು ಹಲಾಲ್ ಬಜೆಟ್ ಎಂದು ಟೀಕಿಸಿದೆ. ವಾಸ್ತವದಲ್ಲಿ ಇಸ್ಲಾಂ ಧರ್ಮದಲ್ಲಿ ಹಲಾಲ್ ಎಂದರೆ ಪರಿಶುದ್ಧ ಎಂದರ್ಥ. ಅಂದರೆ ಸಿದ್ದರಾಮಯ್ಯನವರ ಬಜೆಟ್ ಪರಿಶುದ್ಧ ಎಂದು ಬಿಜೆಪಿಗರೇ ಒಪ್ಪಿಕೊಂಡಿದ್ದಾರೆ. ಇನ್ನು ಮುಸ್ಲಿಂ ತುಷ್ಠೀಕರಣ ಬಗ್ಗೆ ಮಾತನಾಡುವ ಬಿಜೆಪಿಗರು ದೆಹಲಿಯಲ್ಲಿ ಮಹಿಳೆಯರಿಗೆ ೨.೫೦೦ ರೂ.ಕೊಡುವ ನೀವು ತುಷ್ಠೀಕರಣ ಮಾಡುತ್ತಿಲ್ಲವೇ ಎಂದು ಲಕ್ಷ್ಮಣ್ ಟೀಕಿಸಿದರು














