ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಲಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಡಾದಲ್ಲಿ ₹5 ಸಾವಿರ ಕೋಟಿ ಮೊತ್ತದ ಹಗರಣ ನಡೆದಿದೆ. ಮುಖ್ಯಮಂತ್ರಿ ಕುಟುಂಬವೇ ನಿವೇಶನಗಳ ಫಲಾನುಭವಿ ಆಗಿರುವ ಕಾರಣ ಸ್ವತಂತ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಈ ಹಿಂದಿನಿಂದಲೂ ಒತ್ತಾಯಿಸುತ್ತ ಬಂದಿದೆ. ರಾಜ್ಯಪಾಲರು ಸಹ ತನಿಖೆಗೆ ಸೂಚಿಸಿದ್ದಾರೆ. ಈಗಾಲಾದರೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಸತತ ಮೂರು ಬಾರಿ ಇ.ಡಿ. ದಾಖಲೆ ಕೇಳಿದ್ದರೂ ಮುಡಾ ಅಧಿಕಾರಿಗಳು ನೀಡಿಲ್ಲ. ಹೀಗಾಗಿಯೇ ಈ ದಾಳಿ ನಡೆದಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇದ್ದರೆ ಬಿಜೆಪಿ ಕಾನೂನಾತ್ಮಕ ಹೋರಾಟ ಮುಂದುವರಿಸಲಿದೆ ಎಂದರು.
ಇ.ಡಿ. ದಾಳಿ ರಾಜಕೀಯ ಪ್ರೇರಿತ ಅಲ್ಲ. ಕೇವಲ 14 ನಿವೇಶನಗಳು ಮಾತ್ರವಲ್ಲ, ಇಡೀ ಹಗರಣದ ಸಮಗ್ರ ತನಿಖೆ ಆಗಬೇಕು ಎಂದು ಕೋರಿದರು.