ಬೆಂಗಳೂರು: ನಿರಂತರವಾಗಿ ಮತ ಪ್ರಚಾರ ಕಾರ್ಯದಲ್ಲಿ ತೊಡಗಿ ಎಡಗೈ ನೋವಿನಿಂದ ಬಳಲುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗೆ ಆಗಮಿಸಿದ ವೈದ್ಯರು ತಪಾಸಣೆ ನಡೆಸಿದ್ದಾರೆ.
ಎಡಗೈ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಎರಡು ಕೈಗಳು ಊದಿಕೊಂಡಿದ್ದು, ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಆಗಮಿಸಿದ್ದರು.
ವಿಶ್ರಾಂತಿ ಸಿಗದ ಹಿನ್ನೆಲೆಯಲ್ಲಿ ಕೊಂಚ ಬಳಲಿರುವ ಸಿದ್ದರಾಮಯ್ಯ ನಿನ್ನೆ ಸಹ ಸಾಕಷ್ಟು ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದರು. ಇಂದು ವೈದ್ಯರು ಬಂದು ಎಡಗೈ ಊತದ ತಪಾಸಣೆಯ ಜತೆಗೆ ಅವರ ಆರೋಗ್ಯ ತಪಾಸಣೆ ಮಾಡಿಕೊಂಡು ತೆರಳಿದ್ದಾರೆ.
ಸಿದ್ದರಾಮಯ್ಯ ಖಾಸಗಿ ವೈದ್ಯ ರವಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಕೈ ಊತ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗಲು 15 ದಿನ ರೆಸ್ಟ್ ಬೇಕು. Viral Herpes ಇನ್ಫೆಕ್ಷನ್’ನಿಂದ ಕೈ ಊತ ಕಾಣಿಸಿಕೊಂಡಿದೆ. ಒತ್ತಡದಿಂದ ಇನ್ಫೆಕ್ಷನ್ ಕಾಣಿಸಿಕೊಂಡಿದೆ. ಇದನ್ನು ಹೊರತುಪಡಿಸಿ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ ಎಂದರು.
ನಾಳೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಇಂದು ಸಂಜೆ ಮೈಸೂರಿಗೆ ತೆರಳಲಿದ್ದಾರೆ. ಬೆಂಗಳೂರಿಂದ ಸಂಜೆ ಮೈಸೂರು ಕಡೆ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸುವರು. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಫಲಿತಾಂಶ ನೋಡಿಕೊಂಡು ವರುಣ ಕಡೆ ಪ್ರಯಾಣ ಮಾಡಲು ತೀರ್ಮಾನಿಸಿದ್ದಾರೆ.