ಮನೆ ರಾಜ್ಯ ಸಿದ್ದರಾಮಯ್ಯನವರದು ವೈಯಕ್ತಿಕ ಅಭಿಪ್ರಾಯ: ಪ್ರಿಯಾಂಕ್ ಖರ್ಗೆ

ಸಿದ್ದರಾಮಯ್ಯನವರದು ವೈಯಕ್ತಿಕ ಅಭಿಪ್ರಾಯ: ಪ್ರಿಯಾಂಕ್ ಖರ್ಗೆ

0

ಮೈಸೂರು: ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಗುರುವಾರ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, “ಸಿದ್ದರಾಮಯ್ಯನವರದು ವೈಯಕ್ತಿಕ ಅಭಿಪ್ರಾಯ. ತೀರ್ಮಾನ ಮಾಡಲು ಹೈಕಮಾಂಡ್ ಇದೆ” ಎನ್ನುವ ಮೂಲಕ ತನ್ನ ಅಸಮಾಧಾನ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್, ಇದು ಅವರವರ ವೈಯಕ್ತಿಕ ಹೇಳಿಕೆ. ಹೈ ಕಮಾಂಡ್ ಯಾರು ಸಿಎಂ ಆಗಬೇಕು, ಮುಂದುವರೆಯಬೇಕು ಎಂಬುದನ್ನು ನಿರ್ಧರಿಸುತ್ತದೆ. ಒಂದು ವೇಳೆ ಹೈ ಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ದನಿದ್ದೇನೆ” ಎಂದರು.

ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆಯಿದೆ. ಸಿಎಂ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಜಿಲ್ಲಾ ಪಂಚಾಯಾತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರವಿದೆ. ಇದರಲ್ಲಿ ತಪ್ಪು ಏನಿಲ್ಲ. ಆದರೆ, ಅವರ ಹೇಳಿಕೆ ಕಲ್ಲಿನ ಮೇಲೆ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎನ್ನುವ ಮೂಲಕ ಸಿಎಂ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಿಡಿಕಾರಿದ ಅವರು, ರಾಜ್ಯದಲ್ಲಿ ವಿಪಕ್ಷ ಎಲ್ಲಿದೆ?  ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಪಾರ್ಟಿಯಾಗಿದೆ. ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಧ್ವನಿ ಇಲ್ಲದಂತಾಗಿದೆ. ಇಲ್ಲಿ ಕಾಂಗ್ರೆಸ್ ವಿರುದ್ದ ಘರ್ಜಿಸುವ ಬದಲು ಕೇಂದ್ರ ನಾಯಕರ ಬಳಿ ಘರ್ಜಿಸಿದರೆ ವಿಪಕ್ಷ ಸ್ಥಾನವಾದರು ಸಿಗುತಿತ್ತು. ನಮಗೆ ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ. ಯಡಿಯೂರಪ್ಪ ಅವರನ್ನ ಕಡೆಗಣಿಸಿದ್ದಾರೆ. ಈಗ ಮಾತನಾಡಿದರೆ ಮಗನಿಗೆ ಸ್ಥಾನ ಸಿಗಬಹುದು ಎಂಬ ಕಾರಣಕ್ಕೆ ಮಾತನಾಡುತ್ತಿದ್ದಾರೆ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆಯೂ ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್, ಜೆಡಿಎಸ್ ನ ಕುಟುಂಬದವರು ಹೋಗಿ ಮಾಡಿಕೊಂಡು ಬಂದ ಮೈತ್ರಿ ಇದು. ರಾಜ್ಯದ ಬಿಜೆಪಿ ನಾಯಕರು ಸಹ ಹೋಗಿಲ್ಲ. ಮಾಜಿ ಸಚಿವರು, ಮಾಜಿ ಸಿಎಂ ಎಲ್ಲರನ್ನೂ ಕತ್ತಲಲ್ಲಿಟ್ಟು ಮೈತ್ರಿ ಮಾಡಲಾಗಿದೆ. ಇದನ್ನು ಖುದ್ದು ಬಿಜೆಪಿಯ ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿಯವರು ತಮ್ಮದನ್ನ ತಾವು ನೋಡಿಕೊಳ್ಳಲಿ. ಕಾಂಗ್ರೆಸ್ ನ ಚಿಂತೆ ಅವರಿಗೆ ಬೇಡ. ನಮ್ಮ ಆದ್ಯತೆ ಐದು ಗ್ಯಾರೆಂಟಿಗಳನ್ನ ಅನುಷ್ಠಾನ ಮಾಡುವುದಾಗಿದೆ ಎಂದರು.

ಹಿಂದಿನ ಲೇಖನಬೈಕ್ ​ಗೆ ಬೊಲೆರೋ ವಾಹನ ಡಿಕ್ಕಿ: ಇಬ್ಬರ ಸಾವು
ಮುಂದಿನ ಲೇಖನಡಿಸೆಂಬರ್‌ 4ರಿಂದ ಚಳಿಗಾಲದ ಅಧಿವೇಶನ ಸಾಧ್ಯತೆ: ಯು.ಟಿ. ಖಾದರ್‌