ಮನೆ ರಾಜಕೀಯ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಪುತ್ರ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರಲಿದ್ದಾರೆ: ನಳಿನ್‌ ಕುಮಾರ್ ಕಟೀಲ್

ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಪುತ್ರ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರಲಿದ್ದಾರೆ: ನಳಿನ್‌ ಕುಮಾರ್ ಕಟೀಲ್

0

ಬೆಂಗಳೂರು(Bengaluru): ಮುಂದಿನ ದಿನಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಿಂದಲೂ ಜನರು ಬಿಜೆಪಿ ಕಡೆ ಬರಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸೋಮವಾರ ಮೈಸೂರಿನ ಮಾಜಿ ಶಾಸಕ ವಾಸು ಅವರ ಪುತ್ರ ಕಾಂಗ್ರೆಸ್‌ನ ಕವೀಶ್‌ಗೌಡ ವಾಸು ಮತ್ತು ಇತರರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಸು ಅವರ ಮನೆಯಿಂದಲೇ ಪರಿವರ್ತನೆ ಆರಂಭವಾಗಿದೆ ಎಂದರು.

ಬಿಜೆಪಿ ಕೆಲಸವನ್ನು ನೋಡುತ್ತದೆ. ಮನೆತನದ, ಕುಟುಂಬದ ಹಿನ್ನೆಲೆಯನ್ನು ನೋಡುವುದಿಲ್ಲ. ಸಮಾಜದ ಜೊತೆಗಿನ ಒಡನಾಟ, ಸಿದ್ಧಾಂತದ ಮೇಲಿನ ನಂಬಿಕೆ, ಕೆಲಸಗಳನ್ನು ಗುರುತಿಸಿ ಅವಕಾಶ ಕೊಡುತ್ತದೆ. ಇಂದು ಹಳೆ ಮೈಸೂರು ಭಾಗದ ಇತರ ಪಕ್ಷಗಳ ಹಲವು ಪ್ರಮುಖರು ಪಕ್ಷವನ್ನು ಸೇರಿದ್ದಾರೆ. ಕುಟುಂಬವಾದದಿಂದ ರಾಷ್ಟ್ರೀಯವಾದಕ್ಕೆ ಬರುವ ಎಲ್ಲರನ್ನೂ ನಾವು ಸ್ವಾಗತಿಸುತ್ತೇವೆ ಎಂದು ನಳಿನ್‌ ಹೇಳಿದರು.

ಕಾಂಗ್ರೆಸ್‌ ಬಸ್‌ ಯಾತ್ರೆ ಹೊರಟಿದೆ. ಹೋಗ್ತಾ, ಹೋಗ್ತಾ ಬ್ರೇಕ್‌’ಫೇಲ್‌ ಆಗುತ್ತದೆ. ಇನ್ನೊಂದು ಪಂಚರತ್ನ ಯಾತ್ರೆ ಆರಂಭವಾಗಿದೆ. ವಿಜಯಪುರ ತಲುಪುವಾಗ ಹಾಸನದಲ್ಲಿ ಯಾತ್ರೆಗೆ ಪಂಕ್ಚರ್‌ ಹಾಕುವ ಪ್ರಯತ್ನಗಳು ಆರಂಭವಾಗಿದೆ. ಎರಡೂ ಯಾತ್ರೆಗಳು ಪೂರ್ಣಗೊಳ್ಳುವುದಿಲ್ಲ. ಆದರೆ ಬಿಜೆಪಿಯ ಸಂಕಲ್ಪ ಯಾತ್ರೆ ವಿಜಯೀ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದೇ ಗೆಲ್ಲಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌’ನ ಮೈಸೂರು ಸ್ಥಳೀಯ ಮುಖಂಡರಾದ ಸೋಮಶೇಖರ್‌, ವೆಂಕಟೇಶ್‌,ಸಿ.ವಿ.ರಾಜಪ್ಪ, ಗಿರೀಶ್‌ ನಾಶಿ, ಡಾ.ಪುಣ್ಯವತಿ ನಾಗಾಜ್‌, ದಿವಾಕರ್ ಗೌಡ ಮುಂತಾದವರು ಬಿಜೆಪಿ ಸೇರಿದರು.