ಮೈಸೂರು(Mysuru): ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದ್ರು ಇದ್ರೆ ಅದು ನರೇಂದ್ರ ಮೋದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿ ಅವರು ರೈತರ ಜೇಬಿನಿಂದ 3,600ಕೋಟಿ ದೋಚಿದ್ದಾರೆ. ನರೇಂದ್ರ ಮೋದಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿದ್ದರು. ಸ್ವತಂತ್ರ ಬಂದು 75 ವರ್ಷ ಆಗುವ ವೇಳೆಯಲ್ಲಿ ದೇಶದ ಸಾಲವನ್ನ ದುಪ್ಪಟ್ಟು ಮಾಡಿದ್ದಾರೆ ಅಷ್ಟೇ. ಅಂಬಾನಿ, ಅದಾನಿ ಸಂಪತ್ತು ಮಾತ್ರ ಏರಿಕೆ ಆಗಿದೆ. ಅಂತಹವರ ಸಾಲ ಮನ್ನಾ ಮಾಡಿದ್ದಾರೆ. ಇವರು ಯಾರ ಪರ ಇದ್ದಾರೆ. ಕಾರ್ಪೊರೇಟ್ ಟ್ಯಾಕ್ಸ್ ಮನಮೋಹನ್ ಕಾಲದಲ್ಲಿ 35% ಇತ್ತು, ಈಗ 23%ಗೆ ಇಳಿಸಿದ್ದಾರೆ. ಕೇಂದ್ರಕ್ಕೆ ಇದರಿಂದ 5 ಲಕ್ಷ ಕೋಟಿ ಕಡಿಮೆ ಆಯ್ತು. ಇದೆಲ್ಲ ಸುಳ್ಳಾದರೆ ಒಂದೇ ವೇದಿಕೆಗೆ ಬರಲಿ ಎಂದು ಪ್ರದಾನಿ ಮೋದಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
ಹಾಗೆಯೇ ಮೋದಿ ಪ್ರಧಾನಿ ಆದಮೇಲೆ 8 ಕೋಟಿ ಉದ್ಯೋಗ ತಪ್ಪಿ ಹೋಗಿವೆ. ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದೇ ನರೇಂದ್ರ ಮೋದಿ ಅವರ ಕೊಡುಗೆಯಾ? ದೇಶದ ಸಾಲ 53.11ಲಕ್ಷ ಕೋಟಿಯಿಂದ 152 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಇದನ್ನ ಯಾರು ತೀರಿಸಬೇಕು ಹೇಳಿ. ದೇಶದಲ್ಲಿ ಯುವಕರ, ಮಹಿಳೆಯರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಮೋದಿ ಪ್ರಧಾನಿ ಆಗಿ 8 ವರ್ಷ ಆಗುತ್ತಿದೆ. 16 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಯುವಕರು ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ, ಬೋಂಡಾ ಮಾರಿ ಅಂತಾರೆ. ವಿಶ್ವಾಸ ಇಟ್ಟು ವೋಟ್ ಹಾಕಿದ ಯುವಕರ ತಲೆ ಮೇಲೆ ಚಪ್ಪಡಿ ಎಳೆದು ಬಿಟ್ರಲ್ಲಾ ಮಿಸ್ಟರ್ ಮೋದಿ ಎಂದು ಹರಿಹಾಯ್ದರು.
ತಿನ್ನಲ್ಲ ತಿನ್ನಕ್ಕೆ ಬಿಡಲ್ಲ ಅಂತ ಹೇಳಿದ್ರಿ. ಕಂಟ್ರ್ಯಾಕ್ಟರ್ ಅಸೋಸಿಯೇಷನ್ 2020ನೇ ಇಸವಿಯಲ್ಲಿ ನಿಮಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಕಂಟ್ರ್ಯಾಕ್ಟರ್ಸ್ ಬದುಕಲು ಸಾಧ್ಯ ಇಲ್ಲ, ನಮ್ಮ ರಕ್ತ ಹೀರುತ್ತಿದ್ದಾರೆ. 40% ಕಮಿಷನ್ ಕೇಳ್ತಿದ್ದಾರೆ ಅಂದಿದ್ದರು. ಕರ್ನಾಟಕ ಇತಿಹಾಸದಲ್ಲಿ ಈ ರೀತಿ ಪತ್ರ ಬರೆದ ನಿದರ್ಶನ ಇಲ್ಲ. ತನಿಖೆ ಮಾಡಿಸುವಂತೆ ಕೇಳಿದ್ದರೂ, ಇವತ್ತಿನವರೆಗೆ ತನಿಖೆ ಮಾಡಿಸಿಲ್ಲ. ನಿಮ್ಮನ್ನ ಚೌಕಿದಾರ ಅಂತ ಕರಿಯಬೇಕಾ.? ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಶಿಫಾರಸ್ಸು ಮಾಡುವ ಪ್ರಧಾನಿ ಯಾರಾದ್ರು ಇದ್ರೆ ಅದು ನರೇಂದ್ರ ಮೋದಿ ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಅಚ್ಚೇ ದಿನ್ ಆಯೇಗ ಅಂದಿದ್ರು. ಇವತ್ತು ಅಚ್ಚೇ ದಿನ್ ಬಂತಾ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳೆಲ್ಲಾ ಏರಿಕೆ ಆಗಿದೆ. ಮಿಸ್ಟರ್ ನರೇಂದ್ರ ಮೋದಿಜಿ ಕಹಾಯೇ ಅಚ್ಚೇ ದಿನ್.ಹೇಳಿ, ಜನರಿಗೆ ಉತ್ತರ ಕೊಡಿ. ಗೊಬ್ಬರದ ಬೆಲೆ ಏರಿಕೆ ಆಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಆದಾಯ ಹೆಚ್ಚಿಸುತ್ತೇವೆ ಅಂತ ಸುಳ್ಳು ಹೇಳಿದ್ದೀರಿ ಎಂದು ಸಿದ್ಧರಾಮಯ್ಯ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಸಂವಿಧಾನದಲ್ಲಿ ಯಾವುದೇ ಒಂದು ಧರ್ಮದ ಮೇಲೆ ದೇಶ ನಿಂತಿಲ್ಲ. ಸಮಾಜ ಸರ್ವ ಧರ್ಮಗಳ ಸಮನ್ವಯ. ಎಲ್ಲಾ ಧರ್ಮಗಳಿಗೂ ಅವಕಾಶ ಕೊಟ್ಟಿರೋದು ನಮ್ಮ ಸಂವಿಧಾನ. ಹಿಂದುತ್ವದ ವಿಚಾರ ಮುಂದಿಟ್ಟುಕೊಂಡು ಜನರ ಭಾವನೆಗಳನ್ನು ಕೆರಳಿಸಿದ್ದಾರೆ. ನಾವೇನು ಹಿಂದುಗಳಲ್ವಾ.? ಎಂದು ಪ್ರಶ್ನಿಸಿದ ಸಿದ‍್ಧರಾಮಯ್ಯ, ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಅಂತ ಸಂವಿಧಾನ ಹೇಳಿದೆ. ಇವರಿಂದ ದೇಶ ಪ್ರೇಮ ಕಲಿಯಬೇಕಾ. ದೇಶಕ್ಕೋಸ್ಕರ ಬಲಿದಾನ ಮಾಡಿ, ಆಸ್ತಿ ಪಾಸ್ತಿ ಕಳೆದುಕೊಂಡಿದ್ದು ಕಾಂಗ್ರೆಸ್ ಪಕ್ಷದವರು. 1942ರಲ್ಲಿ ಕ್ವಿಟ್ ಇಂಡಿಯಾ ಮೂಮೆಂಟ್ ನಲ್ಲಿ ಆರ್ ಎಸ್ಎಸ್ ನ ಮುಖ್ಯಸ್ಥ ಬ್ರಿಟಿಷರ ಜೊತೆ ಸೇರಿ ಹೋರಾಟ ಹತ್ತಿಕ್ಕಿದ್ದರು. ರಾಷ್ಟ್ರ ಭಕ್ತಿ, ದೇಶ ಭಕ್ತಿ ಕಾಂಗ್ರೆಸ್ ನವರ ರಕ್ತದ ಕಣದಲ್ಲಿ ಬೆರೆತಿದೆ. ನಿಮ್ಮಿಂದ ದೇಶಭಕ್ತಿಕಲಿಯುವ ಅಗತ್ಯವಿಲ್ಲ. ಇವತ್ತು ದೇಶ, ರಾಜ್ಯ ಹಾಳಾಗ್ತಿವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದರು.