ಬೆಂಗಳೂರು(Bengaluru): ಬೆಂಗಳೂರಿನ ದಿ ಪಾರ್ಕ್ ಹೋಟೆಲ್ ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಆರೋಪದಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ದಾಂತ್ ಕಪೂರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎಂ.ಜಿ.ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ ‘ದಿ ಪಾರ್ಕ್ ಹೋಟೆಲ್’ನಲ್ಲಿ ಹಲಸೂರು ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ, ಡ್ರಗ್ಸ್ ಸೇವನೆ ಆರೋಪದ ಮೇಲೆ ಸಿದ್ದಾಂತ್ ಸೇರಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.
ಪಂಚತಾರಾ ಹೋಟೆಲ್ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಹಲಸೂರು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, ಅವರಲ್ಲಿ ನಟ ಸಿದ್ದಾಂತ್ ಕಪೂರ್ ಸೇರಿ ಐವರ ವೈದ್ಯಕೀಯ ವರದಿ ಬಂದಿದ್ದು, ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ. ಅವರನ್ನು ವಶಕ್ಕೆ ಪಡೆಯಲಾಗಿದೆ.
ಆ ಪೈಕಿ ಐದು ಜನರು ಡ್ರಗ್ಸ್ ಸೇವಿಸಿರುವುದು ಪರೀಕ್ಷೆಯ ಫಲಿತಾಂಶದಿಂದ ಪತ್ತೆಯಾಗಿದೆ. ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ, 1985 (ಎನ್ಡಿಪಿಎಸ್) ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.