ಮನೆ ರಾಜ್ಯ ನಾಗಾವಿ ಸುತ್ತಮುತ್ತಲ ನಾಲ್ಕು ಸ್ಮಾರಕಗಳ ಅಭಿವೃದ್ಧಿ ಒಪ್ಪಂದ ಪತ್ರಕ್ಕೆ ಸಹಿ: ಪ್ರಿಯಾಂಕ್ ಖರ್ಗೆ

ನಾಗಾವಿ ಸುತ್ತಮುತ್ತಲ ನಾಲ್ಕು ಸ್ಮಾರಕಗಳ ಅಭಿವೃದ್ಧಿ ಒಪ್ಪಂದ ಪತ್ರಕ್ಕೆ ಸಹಿ: ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರೊಂದಿಗೆ ಇಂದು (07.11.2023) ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ನಾಗಾವಿ ಯಲ್ಲಮ್ಮ ದೇವಿಯ ದರ್ಶನ ಪಡೆದು, ‘ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ’ ಕಾರ್ಯಕ್ರಮದಡಿಯಲ್ಲಿ ಕೈಗೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಚಿತ್ತಾಪುರದ ನಾಗಾವಿ ಪ್ರದೇಶದಲ್ಲಿರುವ ನಾಲ್ಕು  ಸ್ಮಾರಕಗಳ ಅಭಿವೃದ್ದಿಗೆ ಬೆಂಗಳೂರು ಮೂಲದ ‘ಯುನೈಟೆಡ್ ವೇ ಆಫ್ ಬೆಂಗಳೂರು’ ಸಂಸ್ಥೆಯೊಂದಿಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.

ಚಿತ್ತಾಪುರದ ನಾಗಾವಿ ನಾಡು ಐತಿಹಾಸಿಕ‌ ಹಿನ್ನೆಲೆ ಹೊಂದಿದ್ದು, ಇಲ್ಲಿ ಅಪರೂಪದ ಸ್ಮಾರಕಗಳಿವೆ, ಅವುಗಳ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದೆ. ಈ ಕುರಿತು ಹಿರಿಯ ಸಚಿವರಾದ ಹೆಚ್.ಕೆ‌ ಪಾಟೀಲ್ ಅವರೊಂದಿಗೆ ಚರ್ಚಿಸಿ, ಸ್ಮಾರಕಗಳ ರಕ್ಷಣೆಗೆ ಬೇಕಾಗುವ ಅಗತ್ಯ ಕ್ರಮಗಳ ಬಗ್ಗೆ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯೊಂದಿಗೆ ಸಚಿವರು ಮಾತುಕತೆ ನಡೆಸಿದರು. ಪ್ರವಾಸೋದ್ಯಮ‌ ಸಚಿವರ ಸಕಾರಾತ್ಮಕ ಸ್ಪಂದನೆಯಿಂದಾಗಿ ಐತಿಹಾಸಿಕ ನಾಡು ನಾಗಾವಿಯ ಪ್ರಸಿದ್ಧತೆ ಇಡೀ ನಾಡಿಗೆ ತಲುಪಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ, ಇತಿಹಾಸ ಹಾಗೂ ಸ್ಮಾರಕಗಳನ್ನು ಜನರಿಗೆ ತಿಳಿಸಬೇಕಿದೆ. ಹುಲಿ ಸಂರಕ್ಷಿತ ಅರಣ್ಯ, ಅಪರೂಪದ ಸ್ಮಾರಕಗಳು ಸೇರಿದಂತೆ ಹಲವಾರು ಪ್ರಾಣಿ – ಪಕ್ಷಿಗಳ ರಕ್ಷಿತಾರಣ್ಯ ನಮ್ಮ ನಾಡಿನಲ್ಲಿದೆ, ನಮ್ಮ ಸಂಸ್ಕೃತಿಯ ಭಾಗವಾಗಿರುವ ಪ್ರತಿಯೊಂದು ಸಂಪನ್ಮೂಲಗಳನ್ನು ಕಾಪಾಡುವ ಹೊಣೆಗಾರಿಗೆ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಚಿತ್ತಾಪುರಲ್ಲಿರುವ ಅತಿದೊಡ್ಡ ಸಿಮೆಂಟ್ ಕಂಪೆನಿಗಳಲ್ಲಿ ಒಂದಾದ ಓರಿಯಂಟಿಲ್‌ ಸಂಸ್ಥೆ ಕೂಡ ನಾಗಾವಿ ಯಲ್ಲಮ್ಮ ದೇವಾಲಯದ‌ ಅಭಿವೃದ್ದಿಗೆ ಮುಂದೆ ಬಂದಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್ ಅವರ ಸಲಹೆ ಮತ್ತು ಸಹಕಾರದಲ್ಲಿ ಈ ಕಾರ್ಯ ನಡೆಯಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.                                                                         

ವೇದಿಕೆಯ ಮೇಲೆ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಬಸವರಾಜ್ ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಶ್ರೀನಿವಾಸಲು ಅಡ್ಡೂರು ಸೇರಿದಂತೆ ಹಲವರಿದ್ದರು.