ಮನೆ ಮನರಂಜನೆ ಸೈಮಾ ಪ್ರಶಸ್ತಿ: ನಾಮ ನಿರ್ದೇಶನಗೊಂಡ ಕನ್ನಡ ಸಿನಿಮಾಗಳಿವು

ಸೈಮಾ ಪ್ರಶಸ್ತಿ: ನಾಮ ನಿರ್ದೇಶನಗೊಂಡ ಕನ್ನಡ ಸಿನಿಮಾಗಳಿವು

0

ಬೆಂಗಳೂರು (Bengaluru): ಪ್ರತಿಷ್ಠಿತ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ (ಸೈಮಾ) 10ನೇ ಆವೃತ್ತಿ (2021) ಬೆಂಗಳೂರಿನಲ್ಲಿ ಇದೇ ಸೆ.10 ಹಾಗೂ 11ರಂದು ನಡೆಯಲಿದ್ದು, ಸೈಮಾ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ.

ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡದಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ವಿವರವನ್ನು ಸೈಮಾ ತನ್ನ ಟ್ವಿಟರ್‌ ನಲ್ಲಿ  ಪ್ರಕಟಿಸಿದೆ.

ಕನ್ನಡದಲ್ಲಿ 2021ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ದರ್ಶನ್‌ ನಟನೆಯ ‘ರಾಬರ್ಟ್‌’, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’, ‘ದುನಿಯಾ’ ವಿಜಯ್‌ ನಟನೆಯ ‘ಸಲಗ’ ಹಾಗೂ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ–2’ ನಾಮನಿರ್ದೇಶನಗೊಂಡಿದೆ. ಜನರು www.siima.inಗೆ ಲಾಗ್‌ಇನ್‌ ಆಗಿ ತಮ್ಮ ನೆಚ್ಚಿನ ಸಿನಿಮಾಗೆ ವೋಟ್‌ ಮಾಡಬಹುದಾಗಿದೆ.

ಇನ್ನು ಕನ್ನಡದಲ್ಲಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ಪೈಕಿ ‘ರಾಬರ್ಟ್‌’ ಮುಂಚೂಣಿಯಲ್ಲಿದೆ. 10 ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡಿದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ‘ಯುವರತ್ನ’ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.

ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸಿನಿಮಾ, 12 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ, ಅತಿ ಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನಗೊಂಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮಲಯಾಳಂನಲ್ಲಿ ‘ಮಿನ್ನಲ್‌ ಮುರುಳಿ’ ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ ತೆಲುಗು ಸಿನಿಮಾ ‘ಅಖಂಡ’, ತಮಿಳಿನಲ್ಲಿ ಧನುಷ್‌ ನಟನೆಯ ‘ಕರ್ಣನ್‌’ ತಲಾ 10 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಹಿಂದಿನ ಲೇಖನದಸರಾ ಯಶಸ್ವಿಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಎಸ್.ಟಿ.ಸೋಮಶೇಖರ್‌
ಮುಂದಿನ ಲೇಖನಡೋಲೊ ಮಾತ್ರೆ ಶಿಫಾರಸ್ಸು ಮಾಡಲು ವೈದ್ಯರಿಗೆ 1 ಕೋಟಿ ರೂ.: ಸುಪ್ರೀಂ ಕೋರ್ಟ್‌ ಗೆ ಮಾಹಿತಿ