ಮನೆ ಮನರಂಜನೆ “ಮೂಕ ಜೀವ’: ಮುಗ್ಧ ಮನಸ್ಸಿನ ಪ್ರತಿಬಿಂಬ

“ಮೂಕ ಜೀವ’: ಮುಗ್ಧ ಮನಸ್ಸಿನ ಪ್ರತಿಬಿಂಬ

0

ಇಲ್ಲೊಬ್ಬ ಮುಗ್ಧನಿದ್ದಾನೆ, ದುರಾದೃಷ್ಟಕ್ಕೆ ಅವನಿಗೆ ಮಾತು ಬರಲ್ಲ, ಕಿವಿಯೂ ಕೇಳಿಸಲ್ಲ. ಈತನೇ ಕಥಾನಾಯಕ. ಎಲ್ಲ ಸರಿಯಿದ್ದುಕೊಂಡವರೇ ಜೀವನದಲ್ಲಿ ಏನೇನೊ ವ್ಯಥೆ ಪಡುವಾಗ, ಇನ್ನು ಇವನ ಪಾಡು ಹೇಗಿರಬಹುದೆಂದು ನೀವೇ

Join Our Whatsapp Group

ಊಹಿಸಬಹುದು. ಆದರೆ, ಇದು ಸಿನಿಮಾ. ಪ್ರೇಕ್ಷಕ ಅಂದುಕೊಂಡಂತೆಎಲ್ಲವೂ ನಡೆಯುವುದಿಲ್ಲ. ನಿರ್ದೇಶಕ ಶ್ರೀನಾಥ ವಸಿಷ್ಠ “ಮೂಕ ಜೀವ’ ಚಿತ್ರದ ಮೂಲಕ ಸಂದೇಶದ ಜೊತೆ ನಿಷ್ಕಳಂಕ ಮನಸ್ಸೊಂದನ್ನು ಅನಾವರಣಗೊಳಿಸಿದ್ದಾರೆ.

ಕಾದಂಬರಿಯ ಕಥೆಯೊಂದು ಇಲ್ಲಿ ತೆರೆಮೇಲೆ ಮೂಡಿರುವುದು ವಿಶೇಷ. ಯಾವುದೇ ಕಮರ್ಷಿಯಲ್‌ ಅಂಶಗಳಿಲ್ಲದೇ ನಿರ್ದೇಶಕರು ಸಾವಕಾಶವಾಗಿ ಕಥೆ ನಿರೂಪಿಸಿದ್ದಾರೆ. ಹಳ್ಳಿ ಹಾಗೂ ನಗರ ಎರಡರ ಚಿತ್ರಣವನ್ನು ಇಲ್ಲಿ ಕಾಣಬಹುದು. ಮಾತು ಬಾರದ, ಕಿವಿ ಕೇಳಿಸದ ಶ್ರೀಕಂಠನ ಮುಗ್ಧತೆ ಕೆಲವರಿಗೆ ಕಿರಿಕಿರಿ. ಮುಂದೆ ಆತ ತಾಯಿಯನ್ನು ಕಳೆದುಕೊಂಡಾಗ, ಹಳ್ಳಿಯಿಂದ ತನ್ನ ಪ್ರೀತಿಯ ಅಕ್ಕನನ್ನು ಹುಡುಕಿ ನಗರಕ್ಕೆ ಬರುತ್ತಾನೆ. ಅಕ್ಕ ಸಿಕ್ಕಿದಳಾದರೂ, ಮುಂದೆ ನಡೆಯುವ ಸನ್ನಿವೇಶಗಳೇ ಕಥೆಯ ಜೀವಾಳ. ಏನೂ ಇರದ ವ್ಯಕ್ತಿಯೊಬ್ಬ ಮುಂದೆ ಏನಾದ? ಎಂಬುದೇ ಚಿತ್ರದ ಒನ್‌ಲೈನ್‌ ಎನ್ನಬಹುದು.

ದೈಹಿಕವಾಗಿ ಏನೇ ನ್ಯೂನತೆ ಇದ್ದರೂ, ಗುರಿ ಹಾಗೂ ಸಾಧಿಸುವ ಛಲ ಇದ್ದವನಿಗೆ ಯಾವುದೂ ತಡೆಗೋಡೆಯಾಗದು ಎಂಬ ಪ್ರೇರಣೆಯ ಸಂದೇಶ ಚಿತ್ರದ ಮೂಲಕ ಸಿಗಲಿದೆ. ನಾಯಕ ಹರ್ಷ ಅವರದ್ದು ಪಾತ್ರಕ್ಕೆ ತಕ್ಕ ಅಭಿನಯ. ಅಪೂರ್ವಶ್ರೀ, ಕಾರ್ತೀಕ್‌, ಮೇಘಶ್ರೀ, ರಮೇಶ್‌ ಪಂಡಿತ್‌, ಗಿರೀಶ್‌ ವೈದ್ಯನಾಥ್‌ ಮುಂತಾದವರು ನಟಿಸಿದ್ದಾರೆ. ವಿ. ಮನೋಹರ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಓಘ ನೀಡಿದೆ.