ಮನೆ ಕೃಷಿ ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಸಿಂಧನೂರು ಬಂದ್: ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ

ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಸಿಂಧನೂರು ಬಂದ್: ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ

0

ರಾಯಚೂರು: ಜೋಳ ಖರೀದಿ ಕೇಂದ್ರ ಪುನರಾರಂಭಕ್ಕೆ ಒತ್ತಾಯಿಸಿ ಸಿಂಧನೂರಿನಲ್ಲಿ ರೈತ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ. ಬಂದ್‌ಗೆ ಸಾರ್ವಜನಿಕರಿಂದ ಹಾಗೂ ವಿವಿಧ ವಾಣಿಜ್ಯ ವಲಯಗಳಿಂದ ಉತ್ಕೃಷ್ಟ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಬಸ್ ಸಂಚಾರ, ವ್ಯಾಪಾರ ವಹಿವಾಟು, ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಬಸ್‌ಗಳು ರಸ್ತೆಗಿಳಿಯದೇ, ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿದೆ. ಶೇ. 100ರಷ್ಟು ವ್ಯಾಪಾರ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೂ ಆಟೋ ಚಾಲಕರೂ ಸಹ ಬಂದ್‌ಗೆ ಸಾಥ್ ನೀಡಿದ್ದಾರೆ.

ಸಿಂಧನೂರು ತಹಶೀಲ್ದಾರ್ ಕಚೇರಿ ಮುಂದೆ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ತಮ್ಮ ಜೋಳವನ್ನು ಬೆಂಬಲ ಬೆಲೆಗೆ ಖರೀದಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜೋಳ ಬೆಳೆಯು ಸೂಕ್ತ ಮಾರುಕಟ್ಟೆಯಿಲ್ಲದೆ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದಿದೆ.

ಈಗಾಗಲೇ ರೈತರು ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ರಸ್ತೆಯಲ್ಲಿ ಊಟ, ಅರೆಬೆತ್ತಲೆ ಪ್ರತಿಭಟನೆ ಹೀಗೆ ವಿವಿಧ ರೀತಿಯ ಹೋರಾಟ ನಡೆಸಿದ್ದರು. ಆದರೆ ಸರಕಾರದಿಂದ ಯಾವುದೇ ಸ್ಪಂದನೆ ಲಭಿಸದ ಹಿನ್ನೆಲೆ ಸಿಂಧನೂರು ಬಂದ್‌ಗೆ ಕರೆ ನೀಡಲಾಗಿದೆ.

ರೈತ ಹೋರಾಟಕ್ಕೆ ಹೋಟೆಲ್ ಮಾಲೀಕರು, ತರಕಾರಿ ವ್ಯಾಪಾರಿಗಳು, ಸಾರಿಗೆ ಸಿಬ್ಬಂದಿ ಬೆಂಬಲ ನೀಡಿದ್ದಾರೆ. ಆದರೆ ಜನಪ್ರತಿನಿಧಿಗಳ ಮೌನ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.