ಮುಂಬೈ : ಆಶಾ ಭೋಸ್ಲೆ ಅವರು ಬರೋಬ್ಬರಿ 80 ವರ್ಷದ ತಮ್ಮ ಗಾಯನದ ಬದುಕನ್ನು ತೊರೆದು, ಹಾಡು ನಿಲ್ಲಿಸಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಈಗ ಬರೀ ಶೋಕಗೀತೆಯೇ ಕೇಳಿಸುತ್ತಿದೆ. ಇಂದು (ಏ.12) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಿನಿಮಾದ ಸಂಗೀತ ಲೋಕದ ಉಸಿರಾಗಿದ್ದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರು 10ನೇ ವಯಸ್ಸಿಗೆ ಹಾಡಲು ಶುರು ಮಾಡಿದ್ದರು. ವಿವಿಧ ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 8 ದಶಕಗಳ ಸುಂದರ ಬದುಕಿನ ಯಾನ ಮುಗಿಸಿದ ಸ್ವರ ಸಾಮ್ರಾಜ್ಞಿ ನಿನ್ನೆ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಶನಿವಾರ ಹೃದಯ ಸ್ತಂಭನದಿಂದ ಆಶಾ ಭೋಸ್ಲೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಆಶಾ ಭೋಸ್ಲೆ ಶಕ್ತಿಯುತ ಧ್ವನಿಗೆ ಜಗತ್ತೇ ಮರುಳಾಗಿತ್ತು. ಅವರ ಹೆಸರು ಕೇಳುತ್ತಿದ್ದಂತೆಯೇ ತಕ್ಷಣ ನಮಗೆ ಕಿವಿಗೆ ಮಾರ್ಧವ ಹಾಗೂ ಮಾದಕದ ಒಂದು ಧ್ವನಿ ಸುಳಿದು ತಾಗುತ್ತದೆ. ಅವರು ಮಧುರ ಗೀತೆಯಿಂದ ಹಿಡಿದು ಮಾದಕ ಗೀತೆಯನ್ನು ಹಾಡಿದ್ದರು. 10ನೇ ವಯಸ್ಸಿನಲ್ಲಿ ಚಲಾ ಚಲ್ ನವ್ ಬಾಲಾ ಎಂಬ ಮರಾಠಿ ಸಿನಿಮಾಗೆ ಹಾಡು ಹಾಡುವ ಮೂಲಕ ತಮ್ಮ ಗಾಯನ ಬದುಕು ಆರಂಭಿಸಿ, ನಂತರ ಹಿಂದಿರುಗಿ ನೋಡಲೇ ಇಲ್ಲ ಎನ್ನಲಾಗಿದೆ.
1950ರ ದಶಕದಲ್ಲಿ ತಮ್ಮ ಕೆರಿಯರ್‌ನ ತುತ್ತತುದಿಗೆ ಏರಿದರು. ಕಾಲಾನಂತರದಲ್ಲಿ, ಅವರು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದರು. ದಮ್ ಮಾರೋ ಧಮ್.. ಯೇ ಮೇರಾ ದಿಲ್ ಪ್ಯಾರ ಕಾ ದಿವಾನಾ.. ರಂಗೀಲಾರೆ ರೀತಿಯ ಮಾದಕ ಹಾಡುಗಳ ಜೊತೆ ಚುರಾಲಿಯಾ ಹೈ ತುಮ್ನೇ.. ರಾಧಾ ಕೈಸೇನ ಜಲೆದಂತ ಮಾಧುರ್ಯ ಭರಿತ ಹಾಡುಗಳನ್ನು ಕೂಡ ದಿವ್ಯ ಕಂಠದ ಗಾಯಕಿ ಹಾಡಿದ್ದಾರೆ.
ಭಾರತದ ಗಾನಕೋಗಿಲೆ ಲತಾ ಮಂಗೇಶ್ವರ್ ಅವರ ಸಹೋದರಿಯೇ ಆಶಾ ಭೋಸ್ಲೆ. ಲತಾ ಮಂಗೇಶ್ವರ್ ಮೆಲೋಡಿ ಕ್ವೀನ್ ಅಂತ ಖ್ಯಾತಿ ಪಡೆದ್ರೆ, ಆಶಾ ಭೋಸ್ಲೆ ತಮ್ಮದೇ ಬೇರೆ ಛಾಪು ಮೂಡಿಸಿದ್ರು. ಪಾಪ್ ಗಾಯನದಲ್ಲಿ ಹೆಸರುವಾಸಿಯಾದ್ರು. ಜಗತ್ತು ಆಶಾ ಭೋಸ್ಲೆಯವರನ್ನ ಕ್ವೀನ್ ಆಫ್ ಇಂಡಿಪಾಪ್ ಎಂದು ಕರೆಯಿತು. ಅಂದ್ರೆ ಭಾರತೀಯ ಪಾಪ್ ಜಗತ್ತಿನ ರಾಣಿ ಎಂದೇ ಖ್ಯಾತಿಯನ್ನು ಆಶಾ ಅವರು ಪಡೆದಿದ್ದರು. ನೂರಾರು ಪ್ರಶಸ್ತಿಗ ಅವರನ್ನು ಹುಡುಕಿಕೊಂಡು ಬಂದಿದ್ದವು.
ಆಶಾ ಭೋಸ್ಲೆ ಅವರು ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಎರಡು ರಾಷ್ಟ್ರೀಯ ಅವಾರ್ಡ್ಗಳನ್ನು ಪಡೆದುಕೊಂಡಿದ್ದರು. 1981ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು. 1988ರಲ್ಲಿ ಇಜಾಜತ್ ಚಿತ್ರಕ್ಕಾಗಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. 2000ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮತ್ತು 2008ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕೃತರಾಗಿದ್ದರು.















