ಮನೆ ರಾಷ್ಟ್ರೀಯ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್‌ ನಿಧನ

ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್‌ ನಿಧನ

0

ಕೋಲ್ಕತ್ತಾ (Kolkata): ಬಾಲಿವುಡ್‌ ನ ಖ್ಯಾತ ಗಾಯಕ, ʻಕೆಕೆʼ ಎಂದೇ ಪ್ರಸಿದ್ಧರಾಗಿದ್ದ ಕೃಷ್ಣಕುಮಾರ್ ಕುನ್ನತ್ (53) ಅವರು ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.

ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ ಕೆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದ ನಜ್ರುಲ್ ಮಂಚಾ ಆಡಿಟೋರಿಯಂನಲ್ಲಿ ಕೆಕೆ ಸುಮಾರು ಒಂದು ಗಂಟೆ ಕಾಲ ಸಂಗೀತ ಕಾರ್ಯಕ್ರಮ ನೀಡಿದ್ದರು. ಆದರೆ, ಹೋಟೆಲ್‌ ತಲುಪಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದಾಗಲೇ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ತೀರಾ ಸುಸ್ತು ಕಾಣಿಸಿಕೊಂಡ ಪರಿಣಾಮ ಕಾನ್ಸರ್ಟ್‌ನಿಂದ ಕೃಷ್ಣಕುಮಾರ್ ಕುನ್ನತ್ ತಮ್ಮ ಹೋಟೆಲ್ ರೂಮ್‌ಗೆ ಹಿಂದಿರುಗಿದರು. ಹೋಟೆಲ್‌ನಲ್ಲಿನ ಮೆಟ್ಟಿಲುಗಳನ್ನು ಹತ್ತುವಾಗ ಕೃಷ್ಣಕುಮಾರ್ ಕುನ್ನತ್ ಕುಸಿದುಬಿದ್ದರು ಎಂದು ವರದಿಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅರೂಪ್ ಬಿಸ್ವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನವಾರ್ತೆ ಮನಸ್ಸಿಗೆ ನೋವು ತರಿಸಿದೆ. ಕೃಷ್ಣಕುಮಾರ್ ಕುನ್ನತ್ ‘ಕೆಕೆ’ ಅಂತಲೇ ಜನಪ್ರಿಯತೆ ಪಡೆದಿದ್ದರು. ಕೆಕೆ ಅವರ ಹಾಡುಗಳಲ್ಲಿ ಎಲ್ಲಾ ರೀತಿಯ ಭಾವನೆಗಳು ಇರುತ್ತಿದ್ದವು. ಎಲ್ಲಾ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ಕೆಕೆ ರಂಜಿಸಿದ್ದರು. ಕೆಕೆ ಅವರ ಹಾಡುಗಳ ಮೂಲಕ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಅವರು ತಮಿಳು, ತೆಲುಗು, ಮಲಯಾಳ, ಮರಾಠಿ, ಬೆಂಗಾಲಿ ಭಾಷೆಗಳಲ್ಲೂ ಹಾಡಿದ್ದಾರೆ.