ಮನೆ ಅಪರಾಧ `ಎಫ್‌ಐಆರ್’ ರದ್ದು ಕೋರಿ ಹೈಕೋರ್ಟ್ ಗೆ ಗಾಯಕ ಸೋನು ನಿಗಮ್ ಅರ್ಜಿ: ಮೇ 15ಕ್ಕೆ ವಿಚಾರಣೆ...

`ಎಫ್‌ಐಆರ್’ ರದ್ದು ಕೋರಿ ಹೈಕೋರ್ಟ್ ಗೆ ಗಾಯಕ ಸೋನು ನಿಗಮ್ ಅರ್ಜಿ: ಮೇ 15ಕ್ಕೆ ವಿಚಾರಣೆ ಮುಂದೂಡಿಕೆ!

0

ಬೆಂಗಳೂರು: ಕನ್ನಡಿಗರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಗಾಯಕ ಸೋನು ನಿಗಮ್ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸಲು ಅವರು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಆವಲಹಳ್ಳಿ ಠಾಣೆ ಪೊಲೀಸರು ಮತ್ತು ದೂರುದಾರ ಧರ್ಮರಾಜ್ ಅನಂತಯ್ಯ ಅವರಿಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ.

ಏಪ್ರಿಲ್ 25 ರಂದು ಬೆಂಗಳೂರಿನ ಒಂದು ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಸೋನು ನಿಗಮ್ ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬನು “ಕನ್ನಡ ಹಾಡು ಹಾಡಿ” ಎಂದು ಆಗ್ರಹಿಸಿದ್ದ. ಇದರಿಂದ ಬೇಸತ್ತ ನಿಗಮ್, ಹಾಡನ್ನು ಅರ್ಧದಲ್ಲೇ ನಿಲ್ಲಿಸಿ, ʼಪಹಲ್ಗಾಮ್‌ನಲ್ಲಿ ನಡೆದ ಘಟನೆಯ ಕಾರಣ ಇದೇ. ನಿಮ್ಮ ಮುಂದೆ ಯಾರು ನಿಂತಿದ್ದಾರೆ ನೋಡಿಕೊಳ್ಳಿ ಎಂಬಂತ ಮಾತು ಹೇಳಿದರು ಎಂಬ ಆರೋಪ ಕೇಳಿಬಂದಿದೆ.

ಇದರಿಂದಾಗಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 352(1), 351(2) ಮತ್ತು 353 ರಡಿಯಲ್ಲಿ ದ್ವೇಷ ಪ್ರವೃತ್ತಿ, ಕ್ರಿಮಿನಲ್ ಮಾನಹಾನಿ ಮತ್ತು ಭಾಷಾ ಭಾವನೆ ಕೆರಳಿಸಿದ ಆರೋಪಗಳೊಂದಿಗೆ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿವಾದ ಗಂಭೀರ ರೂಪ ಪಡೆದ ನಂತರ, ಸೋನು ನಿಗಮ್ ತಮ್ಮ ಹೇಳಿಕೆಗೆ ಸಾರ್ವಜನಿಕ ಕ್ಷಮೆಯಾಚನೆ ನೀಡಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ, “ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿನ ನನ್ನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು. ನಿನ್ನ ಮೇಲೆ ಯಾವಾಗಲೂ ಪ್ರೀತಿ” ಎಂದು ಬರೆದುಕೊಂಡಿದ್ದರು. ಆದರೆ, ಈ ಕ್ಷಮೆಯಾಚನೆ ಬಂದ ನಂತರವೂ ದೂರು ಹಿಂತೆಗೆದುಕೊಳ್ಳಲಾಗಿಲ್ಲ.

ಸೋನು ನಿಗಮ್ ಸಲ್ಲಿಸಿರುವ ಅರ್ಜಿ ಕುರಿತು ಹೈಕೋರ್ಟ್ ಇದೀಗ ಕಾನೂನು ಪ್ರಕ್ರಿಯೆ ಆರಂಭಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಮುಂದಿನ ವಿಚಾರಣೆ ಮೇ 15 ರಂದು ನಡೆಯಲಿದೆ. ಆ ದಿನದ ಬಳಿಕವೇ ಪ್ರಕರಣದ ಮುಂದಿನ ಹಂತ ತೀರ್ಮಾನವಾಗಲಿದೆ.