ಮನೆ ರಾಜ್ಯ ನಮ್ಮ ಮೆಟ್ರೋದಲ್ಲಿ ಒಂದೇ ದಿನ ದಾಖಲೆ: 9.17 ಲಕ್ಷ ಜನ ಪ್ರಯಾಣ

ನಮ್ಮ ಮೆಟ್ರೋದಲ್ಲಿ ಒಂದೇ ದಿನ ದಾಖಲೆ: 9.17 ಲಕ್ಷ ಜನ ಪ್ರಯಾಣ

0

ಬೆಂಗಳೂರು: ಹೆಚ್ಚು-ಕಡಿಮೆ ಕೇವಲ 10 ದಿನಗಳ ಅಂತರದಲ್ಲಿ “ನಮ್ಮ ಮೆಟ್ರೋ’ ಮತ್ತೂಂದು ದಾಖಲೆ ಮಾಡಿದೆ. ಆಗಸ್ಟ್‌ 14 (ಬುಧವಾರ)ರಂದು ಒಂದೇ ದಿನದಲ್ಲಿ 9.17 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಇದು ಮೆಟ್ರೋ ಆರಂಭವಾದ ದಿನದಿಂದ ಈವರೆಗಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಸಂಖ್ಯೆ 10 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.

Join Our Whatsapp Group

ಸರಣಿ ರಜೆ ಹಿನ್ನೆಲೆಯಲ್ಲಿ ಜನ, ಊರುಗಳ ಕಡೆಗೆ ಮುಖ ಮಾಡಿದ್ದಾರೆ. ನಗರದ ಹಲವು ಭಾಗಗಳಿಂದ ಹತ್ತಿರದ ರೈಲು ಅಥವಾ ಬಸ್‌ ನಿಲ್ದಾಣಗಳಿಗೆ ತೆರಳಲು ಹಾಗೂ ಸಂಚಾರದಟ್ಟಣೆ ಸುಳಿಗೆ ಸಿಲುಕದಿರಲು ಮೆಟ್ರೋ ಮೊರೆ ಹೋಗಿದ್ದಾರೆ. ಪರಿಣಾಮ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌)ದಲ್ಲಿ ಗರಿಷ್ಠ ಪ್ರಯಾಣಿಕರು ಸಂಚರಿಸಿದ್ದಾರೆ.

ಮೆಟ್ರೋದಲ್ಲಿ ಇಡೀ ದಿನ ಒಟ್ಟಾರೆ ಸಂಚರಿಸಿದ 9.17 ಲಕ್ಷ ಪ್ರಯಾಣಿಕರಲ್ಲಿ ನೇರಳೆ ಮಾರ್ಗದಲ್ಲಿ ಅಂದರೆ ವೈಟ್‌ ಫೀಲ್ಡ್‌ನಿಂದ ಚಲ್ಲಘಟ್ಟ ಟರ್ಮಿನಲ್‌ವರೆಗೆ 4,43,343 ಜನ ಮತ್ತು ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗೆ ಅಂದರೆ “ಹಸಿರು’ ಮಾರ್ಗದಲ್ಲಿ 3,01,775 ಜನ ಸಂಚಾರ ಮಾಡಿದ್ದಾರೆ. ಇನ್ನು ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ಚೇಂಜ್‌ನಲ್ಲಿ 1,72,247 ಜನ ಪ್ರಯಾಣಿಸಿದ್ದಾರೆ. ಒಂದೇ ದಿನ ಒಟ್ಟಾರೆ 9,17,365 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬಿಎಂಆರ್‌ ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿದಿನ ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸುವ ಸರಾಸರಿ ಪ್ರಯಾಣಿಕರ ಸಂಖ್ಯೆ 8 ಲಕ್ಷ ಇದೆ. ಈ ಹಿಂದೆ ಆಗಸ್ಟ್‌ 6ರಂದು ಮೆಟ್ರೋದಲ್ಲಿ ಅತಿಹೆಚ್ಚು 8.26 ಲಕ್ಷ ಜನ ಪ್ರಯಾಣಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಅದಕ್ಕೂ ಮುನ್ನ 2022ರ ಆಗಸ್ಟ್‌ 15ರಂದು 8.25 ಲಕ್ಷ ಜನ ಪ್ರಯಾಣಿಸಿದ್ದರು. ಇನ್ನು ಇದೇ ವರ್ಷದ ಜನವರಿಯಲ್ಲಿ 7.48 ಲಕ್ಷ, ಫೆಬ್ರವರಿಯಲ್ಲಿ 7.05 ಲಕ್ಷ, ಮೇ 7.18ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಬುಧವಾರ ಇದೆಲ್ಲಕ್ಕಿಂತ ಹೆಚ್ಚು 9.17 ಲಕ್ಷ ಜನ ಪ್ರಯಾಣಿಸಿದ್ದಾರೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ನಾಗಸಂದ್ರ-ಮಾದವಾರ ಹಾಗೂ ವರ್ಷಾಂತ್ಯದ ವೇಳೆಗೆ ಜನಸಂಚಾರಕ್ಕೆ ಮುಕ್ತವಾಗಲಿರುವ ಆರ್‌.ವಿ. ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ತೆರೆದುಕೊಂಡ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 12-13 ಲಕ್ಷ ತಲುಪಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

 ನೇರಳೆ ಮಾರ್ಗದಲ್ಲಿ 4,43,343

 ಹಸಿರು ಮಾರ್ಗದಲ್ಲಿ 3,01,775

 ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ ಚೇಂಜ್‌ನಲ್ಲಿ 1,72,247

 ಮೆಟ್ರೋದಲ್ಲಿ ಒಟ್ಟು ಪ್ರಯಾಣಿಕರ ಸಂಚಾರ 9,17,365

 ಹಳದಿ ಮಾರ್ಗ ಶುರುವಾದರೆ 12 ಲಕ್ಷ ಪ್ರಯಾಣಿಕರ ಸಂಚಾರ ನಿರೀಕ್ಷೆ