ಮನೆ ಕಾನೂನು ಗುಡ್ಡಗಾಡು ಪ್ರದೇಶಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಬೇಕಿದೆ: ಕೇರಳ ಹೈಕೋರ್ಟ್

ಗುಡ್ಡಗಾಡು ಪ್ರದೇಶಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಬೇಕಿದೆ: ಕೇರಳ ಹೈಕೋರ್ಟ್

0

ಪ್ರವಾಸಿಗರು ಭೇಟಿ ನೀಡುವ ಕೇರಳದ ಗುಡ್ಡಗಾಡು ಪ್ರದೇಶಗಳು ಪ್ಲಾಸ್ಟಿಕ್‌ ಕಸ ಸುರಿಯಲ್ಪಡುವ ತ್ಯಾಜ್ಯ ಪ್ರದೇಶಗಳಾಗದಂತೆ ತಡೆಯುವುದಕ್ಕಾಗಿ  ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧಿಸಬೇಕಿದೆ ಎಂದು ಕೇರಳ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ

Join Our Whatsapp Group

ಮದ್ರಾಸ್‌ ಹೈಕೋರ್ಟ್‌ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದ ಪರಿಣಾಮ ತಮಿಳುನಾಡಿನ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಬೆಚು ಕುರಿಯನ್ ಥಾಮಸ್ ಮತ್ತು ಪಿ ಗೋಪಿನಾಥ್ ಅವರಿದ್ದ ಪೀಠ ಉದಾಹರಿಸಿತು.

ಗಿರಿಧಾಮಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕಾರ್ಯತಂತ್ರವನ್ನು ರೂಪಿಸುವಲ್ಲಿ ತಮಿಳುನಾಡಿನ ಅನುಭವವನ್ನು ಪಡೆದುಕೊಳ್ಳಲು ನ್ಯಾಯಾಲಯ  ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತು.

ಪರಿಸರ ರಕ್ಷಣೆ ಮೂಲಭೂತ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ. ಕನಿಷ್ಠ ರಾಜ್ಯದ ಗುಡ್ಡಗಾಡು ಪ್ರದೇಶಗಳನ್ನಾದರೂ ಪ್ಲಾಸ್ಟಿಕ್‌ ತ್ಯಾಜ್ಯ ಸುರಿಯುವ ಪ್ರದೇಶವಾಗದಂತೆ ನೋಡಿಕೊಳ್ಳುವ ಸಾಮೂಹಿಕ ಜವಾಬ್ದಾರಿ ನಮ್ಮ ಮೇಲಿದೆ. ಬೆಟ್ಟಗುಡ್ಡಗಳಂತಹ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದರಿಂದ ಪರಿಸರ ಮಾಲಿನ್ಯ ಹೆಚ್ಚುತ್ತದೆ. ಆದ್ದರಿಂದ, ಅಂತಹ ಪ್ರದೇಶಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧಿಸಬೇಕು. ನಾಲ್ಕು ವಾರಗಳಲ್ಲಿ ಈ ವಿಚಾರವಾಗಿ ಸರ್ಕಾರ ಸಲಹೆಗಳನ್ನು ನೀಡಬೇಕು ಎಂದು ಅದು ತಿಳಿಸಿದೆ.

ಕೊಚ್ಚಿಯ ಹಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ವಲ್ಲರ್‌ಪದಂ ಕಂಟೈನರ್ ರಸ್ತೆಯ ಬಳಿ ಸುರಿದಿರುವ ತ್ಯಾಜ್ಯ ತೆರವುಗೊಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸುವಂತೆಯೂ ಸರ್ಕಾರಕ್ಕೆ ಪೀಠ ಇದೇ ವೇಳೆ ಆದೇಶಿಸಿದೆ. ಕೇರಳದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಮಸ್ಯೆ  ನಿಭಾಯಿಸಲು ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.  ವಿಚಾರಣೆಯ ಸಂದರ್ಭದಲ್ಲಿ, ಕೇರಳದ ವಿವಿಧ ಊರುಗಳಲ್ಲಿ ತ್ಯಾಜ್ಯದ ರಾಶಿ ವಿಪರೀತವಾಗಿರುವ ಸಮಸ್ಯೆ ಗಮನಿಸಿದ ನ್ಯಾಯಾಲಯ ಸ್ಥಳೀಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕಿದೆ ಎಂದಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ 24, 2025ರಂದು ನಡೆಯಲಿದೆ.