ಮನೆ ರಾಜ್ಯ ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ: ಮಕ್ಕಳಿಗೆ ಕೆವಿಪಿ ಕರೆ

ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ: ಮಕ್ಕಳಿಗೆ ಕೆವಿಪಿ ಕರೆ

ಪ್ರಭಾಕರ್ ಅವರಿಗೆ ಮಣ್ಣಿನ ಗಣಪನನ್ನು ಕಾಣಿಕೆ ನೀಡಿದ ಪುಟಾಣಿಗಳು

0

ಬೆಂಗಳೂರು: ಶ್ರಮ ಮತ್ತು ಬೆವರಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಗಣಪ ನಿಜವಾದ ಪರಿಸರ ಪ್ರೇಮಿ. ಆದ್ದರಿಂದ ಪ್ರತೀ ಮನೆಯಲ್ಲೂ ಮಕ್ಕಳು ಪರಿಸರ ಸ್ನೇಹಿ ಗಣೇಶನನ್ನೇ ಕೂರಿಸಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಕ್ಕಳಿಗೆ ಕರೆ ನೀಡಿದರು.

Join Our Whatsapp Group

ಜವಾಹರ ಬಾಲ ಭವನ ಹಮ್ಮಿಕೊಂಡಿದ್ದ, “ಮಕ್ಕಳಿಗೆ ಜೇಡಿ ಮಣ್ಣಿನ ಗಣಪ ಮಾಡುವ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದರು.

ತನ್ನ ಹೊಟ್ಟೆಗೆ ಹಾವನ್ನು ಸುತ್ತಿಕೊಂಡು, ಇಲಿಯನ್ನು ವಾಹನ ಮಾಡಿಕೊಂಡಿರುವ ಗಣೇಶ ಪರಿಸರ ಪ್ರೇಮಿ. ಹೀಗಾಗಿ ಗಣೇಶ ಹಬ್ಬ ಪರಿಸರ ಸ್ನೇಹಿಯಾಗಿರಬೇಕು. ರಸಾಯನಿಕ ಬೆರೆಸಿದ ಗಣೇಶ ಮೂರ್ತಿಗಳನ್ನು ಕೆರೆಗೆ, ನದಿಗೆ, ಸಮುದ್ರಕ್ಕೆ ವಿಸರ್ಜಿಸಿ ಸಂಭ್ರಮಿಸುವುದು ಗಣೇಶನಿಗೆ ಇಷ್ಟ ಆಗುವುದಿಲ್ಲ. ಹೀಗಾಗಿ ಮಣ್ಣಿನ‌ ಗಣಪನನ್ನು ಮನೆಯಲ್ಲಿ ಕೂರಿಸಿ ಆಗ ಗಣೇಶ ಖುಷಿಯಾಗುತ್ತಾನೆ ಎಂದು ಮಕ್ಕಳಿಗೆ ಪರಿಸರ ಪಾಠ ಮಾಡಿ ಸಲಹೆ ನೀಡಿದರು.

ಮಕ್ಕಳಿಗೆ ಗಣೇಶನ ಸೃಷ್ಟಿಯ ಕತೆ ಹೇಳಿದ ಕೆ.ವಿ.ಪ್ರಭಾಕರ್ ಅವರು ಗಣೇಶ ಆಗಿದ್ದೇ ಬೆವರಿನಿಂದ. ಶ್ರಮ ಮತ್ತು ಬೆವರಿನ ಸಂಸ್ಕೃತಿಯ ಪ್ರತೀಕ ಗಣಪ. ತಂದೆ ತಾಯಿಯರಿಗಿಂತ ದೊಡ್ಡ ದೇವರು ಯಾವುದೂ ಇಲ್ಲ ಎಂದು ಗಣೇಶ ನಂಬಿದ್ದ. ಆದ್ದರಿಂದ ತಂದೆ, ತಾಯಿಯರನ್ನು ಹೆಚ್ಚು ಗೌರವಿಸಿ, ಅವರ ಮಾತು ಕೇಳಿ ಎಂದರು.

ಮಣ್ಣಿನ‌ ಗಣಪ ಮಾಡುವ ಕಾರ್ಯಾಗಾರ ಅತ್ಯಂತ ಸೃಜನಶೀಲವಾದದು.‌ ಮಕ್ಕಳ ಸುಪ್ತ ಪ್ರತಿಭೆಗಳನ್ನು ವ್ಯಕ್ತಪಡಿಸಲು ಉಪಯುಕ್ತವಾದದು. ಇಂಥಾ ವೇದಿಕೆ ಕಲ್ಪಿಸಿಕೊಟ್ಟ ಬಾಲ ಭವನದ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಕಾಳಜಿ ಮತ್ತು‌ ಶ್ರಮ ಅಭಿನಂದನೀಯ ಎಂದರು.

ಮಕ್ಕಳ ಬೆರಳುಗಳಲ್ಲಿ ಮೂಡಿಬಂದ ಮಣ್ಣಿನ ಗಣಪಗಳು ಅದ್ಭುತವಾಗಿದ್ದವು ಎಂದು ಶ್ಲಾಘಿಸಿದ ಪ್ರಭಾಕರ್ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರತೀ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಇದಕ್ಕೆ ಪ್ರತಿಯಾಗಿ ಮಕ್ಕಳು ತಾವು ಮಾಡಿದ್ದ ಗಣಪನನ್ನು ಪ್ರಭಾಕರ್ ಅವರಿಗೆ ಕಾಣಿಕೆಯಾಗಿ ನೀಡಿದರು. 

ಚಲನಚಿತ್ರ ನಟಿ ಪ್ರೇಮಾ ಅವರು‌ ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಬಾಲ ಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು ಮತ್ತು ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಸುಮಾರು 150 ಕ್ಕೂ ಹೆಚ್ಚು ಮಕ್ಕಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.