ಮನೆ ಅಪರಾಧ ಬುರುಡೆ ಗ್ಯಾಂಗ್ ಲಾಕ್ ಮಾಡಲು ಎಸ್‌ಐಟಿಗೆ ಸಾಕ್ಷ್ಯಾಧಾರದ ಕೊರತೆ..!

ಬುರುಡೆ ಗ್ಯಾಂಗ್ ಲಾಕ್ ಮಾಡಲು ಎಸ್‌ಐಟಿಗೆ ಸಾಕ್ಷ್ಯಾಧಾರದ ಕೊರತೆ..!

0

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿಚಾರಣೆ ತೀವ್ರಗೊಳ್ಳುತ್ತಿದೆ. ಆದರೆ ಚಿನ್ನಯ್ಯ ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳ ಬಂಧನ ಈವರೆಗೂ ಆಗದಿದ್ದು, ಎಸ್‌ಐಟಿ ತನಿಖೆ ನಿಗೂಢವಾಗಿದೆ. ಇತ್ತ ಬುರುಡೆ ಗ್ಯಾಂಗ್ ಜಾಲಿ ಮೂಡ್‌ನಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತ್ರ ಬಲಿ ಪಶು ಆಗುತ್ತಾನಾ ಎಂಬ ಅನುಮಾನ ದಟ್ಟವಾಗುತ್ತಿದೆ.

ದಿನಕ್ಕೊಂದು ಟ್ವಿಸ್ಟ್ ಪಡೆದಿರುವ ಧರ್ಮಸ್ಥಳ ಬುರುಡೆ ಪ್ರಕರಣ ಅದ್ಯಾಕೋ ಏನೋ ಈಗೀಗ ಮಂದಗತಿಯಲ್ಲಿ ಸಾಗುತ್ತಿದೆ. ಎಸ್‌ಐಟಿ ತನಿಖೆಯ ಹಾದಿಯೇ ವಿಚಿತ್ರವಾಗಿ ಗೋಚರಿಸುತ್ತಿದೆ. ಬುರುಡೆ ಗ್ಯಾಂಗ್ ವಿಚಾರಣೆ ತೀವ್ರಗೊಳಿಸಿರುವ ಎಸ್‌ಐಟಿ ಈವರೆಗೂ ಯಾರನ್ನೂ ಲಾಕ್ ಮಾಡಿಲ್ಲ. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ, ವಿಠಲ ಗೌಡ, ಯೂಟ್ಯೂಬರ್ ಮನಾಫ್, ಅಭಿಷೇಕ್ ಪ್ರತಿದಿನ ಆರಾಮವಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿ, ನಿರ್ಭಿತಿಯಿಂದ ವಾಪಸ್ ಆಗುತ್ತಿದ್ದಾರೆ.

ಬುರುಡೆ ಪ್ರಕರಣದ ಹಿಂದೆ ಇದೇ ಹೋರಾಟಗಾರರು ಇದ್ದಾರೆ ಅನ್ನೋ ವಿಚಾರ ತಿಳಿದಿದ್ದರೂ ಎಸ್‌ಐಟಿಗೆ ಬಂಧಿಸಲು ಸಾಧ್ಯವಾಗುತ್ತಿಲ್ಲ. ಪ್ರಬಲ ಸಾಕ್ಷ್ಯಗಳ ಹುಡುಕಾಟದಲ್ಲಿರೋ ಎಸ್‌ಐಟಿ ಬುರುಡೆ ಗ್ಯಾಂಗ್ ಮೊಬೈಲ್ ಹೊರತುಪಡಿಸಿದರೆ ಬೇರೆ ಯಾವುದೇ ಆಸರೆ ಇಲ್ಲ ಎನ್ನಲಾಗುತ್ತಿದೆ.

ಈ ನಡುವೆ ಬುರುಡೆ ಷಡ್ಯಂತ್ರದ ಆರೋಪ ಹೊತ್ತವರ ಬಂಧನಕ್ಕೆ ಮೊಬೈಲ್ ಕಾಲ್ ಡೇಟಾ ಬಿಟ್ರೆ ಎಸ್‌ಐಟಿ ಬಳಿ ಬೇರೇನೂ ಪ್ರಬಲ ಸಾಕ್ಷ್ಯಧಾರಗಳು ಇದ್ದಂತೆ ಕಾಣಿಸುತ್ತಿಲ್ಲ. ಇದೇ ಕಾರಣಕ್ಕೆ ಬುರುಡೆ ಟೀಂ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದ ಎಸ್‌ಐಟಿ ಪೊಲೀಸರಿಗೆ ಶಾಕ್ ಎದುರಾಗಿದೆ.

ಗಿರೀಶ್ ಮಟ್ಟಣ್ಣನವರ್ ಕಾಲ್ ಡೇಟಾ ಕೆದಕಿದ ಎಸ್‌ಐಟಿಗೆ ಸ್ಫೋಟಕ ಮಾಹಿತಿ ಲಭಿಸಿದೆ. ಅಸಲಿಗೆ ಗಿರೀಶ್ ಮಟ್ಟಣ್ಣನವರ್‌ಗೆ ಮೊದಲು ಮೊಬೈಲ್ ಕರೆ ಮಾಡಿದ್ದೇ ಚಿನ್ನಯ್ಯ ಅನ್ನೋ ಮಾಹಿತಿ ಲಭಿಸಿದೆ. ಇದೇ ಕಾರಣಕ್ಕೆ ಇಂದೂ ಕೂಡ ಬುರುಡೆ ಗ್ಯಾಂಗ್ ವಿಚಾರಣೆ ಮುಂದುವರೆದಿದೆ.