ತಮಿಳಿನ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ‘ನಾನ್ ವೈಲೆನ್ಸ್’ ಚಿತ್ರಕ್ಕೆ ನಟ ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ.
ಈ ಮೊದಲು ‘ಮೆಟ್ರೋ’ ಹೆಸರಿನ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದ ಫಸ್ಟ್ ಲುಕ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿ, ಶುಭಾಶಯ ಕೋರಿದ್ದಾರೆ.
‘ನಾನ್ ವೈಲೆನ್ಸ್’ ಚಿತ್ರದಲ್ಲಿ ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಮುಖ್ಯ ಪಾತ್ರ ಮಾಡಿದ್ದಾರೆ. ಅದಿತಿ ಬಾಲನ್, ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿ ಇದ್ದಾರೆ. ಈಗ ಶಿವರಾಜ್ಕುಮಾರ್ ಕಡೆಯಿಂದ ಸಿನಿಮಾಗೆ ಮೆಚ್ಚುಗೆ ಸಿಕ್ಕಿರುವುದರಿಂದ ಸಹಜವಾಗಿಯೇ ಸಿನಿಮಾದ ತಂಡದ ಬಲ ಹೆಚ್ಚಿದಂತೆ ಆಗಿದೆ.
ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳನ್ನು ಇಟ್ಟುಕೊಂಡು ‘ನಾನ್ ವೈಲೆನ್ಸ್’ ಸಿನಿಮಾ ಮಾಡಲಾಗಿದೆ. 90ರ ದಶಕದ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ‘ಮೆಟ್ರೋ’ ಮತ್ತು ‘ಕೊಡಿಯಲ್ಲಿ ಒರುವನ್’ ಚಿತ್ರಗಳ ಮೂಲಕ ನಿರ್ದೇಶಕ ಆನಂದ ಕೃಷ್ಣನ್ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರ ಹೊಸ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.
ಈಗಾಗಲೇ ‘ನಾನ್ ವೈಲೆನ್ಸ್’ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ‘ನಾನ್ ವೈಲೆನ್ಸ್’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ‘ಎಕೆ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಲೇಖಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರೆಟ್ರೋ ಕಾಲದ ಫೀಲ್ ಕೊಡಲು ದೊಡ್ಡ ದೊಡ್ಡ ಸೆಟ್ಗಳನ್ನು ಹಾಕಲಾಗಿದೆ. ಯುವಾನ್ ಶಂಕರ್ ರಾಜ್ ಸಂಗೀತ ಸಂಯೋಜನೆ, ಎನ್ಎಸ್ ಉದಯ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಎನ್ಬಿ ಸಂಕಲನ ಈ ಚಿತ್ರಕ್ಕೆ ಇದೆ.