ಮನೆ ರಾಜ್ಯ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಗೆ ಆರು ಮಂದಿ ಬಲಿ

ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಗೆ ಆರು ಮಂದಿ ಬಲಿ

0

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸುರಿದ ಗುಡುಗುಸಹಿತ ಧಾರಾಕಾರ ಮಳೆಗೆ ಆರು ಮಂದಿ ಮೃತಪಟ್ಟಿದ್ದಾರೆ.

Join Our Whatsapp Group

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಮೈಸೂರು, ಕೊಡಗು, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.

ಜೋರಾಗಿ ಬೀಸಿದ ಗಾಳಿಯಿಂದಾಗಿ ರಸ್ತೆಗಳ ಮೇಲೆ ಮರಗಳು ಬಿದ್ದು ವಾಹನ ಸಂಚಾರ ಅಡಚಣೆ ಆಯಿತು. ವಿದ್ಯುತ್ ಕಂಬಗಳು ಉರುಳಿ ಸಾಕಷ್ಟು ಹಾನಿ ಸಂಭವಿಸಿದೆ. ಮಾವಿನ ಫಸಲು ನಷ್ಟವಾಗಿದೆ.

ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಅಂಡರ್ಪಾಸ್ ಮೂಲಕ ಕಾರನ್ನು ದಾಟಿಸಲು ಯತ್ನಿಸಿದಾಗ ಅಲ್ಲಿ ಸಂಗ್ರಹವಾಗಿದ್ದ ನೀರು ಕಾರಿನೊಳಗೆ ನುಗ್ಗಿ ಇನ್ಫೊಸಿಸ್ ಉದ್ಯೋಗಿ ಭಾನುರೇಖಾ (23) ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಡಿ. ಸಿದ್ದಾಪುರದಲ್ಲಿ ಸಿಡಿಲು ಬಡಿದು ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ (39) ಮೃತಪಟ್ಟರೆ, ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕೆ.ದೊಡ್ಡಕೊಪ್ಪಲಿನ ಸ್ವಾಮಿ (18) ಸಾವಿಗೀಡಾಗಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿಯ ಲೋಕೇಶ್ (55) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮರ ದ್ವಿಚಕ್ರ ವಾಹನದ ಮೇಲೆ ಉರುಳಿ, ಸವಾರ ವೇಣುಗೋಪಾಲ್ (58) ಸಾವಿಗೀಡಾಗಿದ್ದಾರೆ. ಕೊಪ್ಪಳ ತಾಲ್ಲೂಕಿನ ಶಿವಪುರದಲ್ಲಿ ಶ್ರೀಕಾಂತ್ ಮೇಟಿ (16) ಎಂಬ ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮಂಟೆಕೊಪ್ಪಲಿನಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಹರೀಶ್ (42) ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿ.ಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದರು. ಅಸ್ವಸ್ಥರನ್ನು ಆಸ್ಪತ್ರೆಗೆ ತಕ್ಷಣ ದಾಖಲಿಸಿಕೊಳ್ಳದೆ ವಿಳಂಬ ತೋರಿದ ಆಸ್ಪತ್ರೆಯ ವಿರುದ್ಧ ತನಿಖೆಗೆ ಅವರು ಆದೇಶಿಸಿದರು. ಭಾನುರೇಖಾ ಅವರ ಕುಟುಂಬಕ್ಕೆ  5 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಲಾಲ್ ಬಾಗ್ ನ ಪಶ್ಚಿಮ ದ್ವಾರದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದ ಪಶ್ಚಿಮ ಬಂಗಾಳದ ಯುವತಿಯ ಮೇಲೆ ಮರ ಬಿದ್ದು ಆಕೆ ಗಾಯಗೊಂಡಿದ್ದಾರೆ. ಮಹಾಲಕ್ಷ್ಮಿಲೇಔಟ್ ನ ಶಂಕರಮಠದ ಸಮೀಪ ಪ್ರವಾಹ ಸ್ಥಿತಿ ಉದ್ಭವಿಸಿತ್ತು. ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ವಿದ್ಯಾರಣ್ಯಪುರಂನಲ್ಲಿ ಮನೆಯೊಂದು ಕುಸಿದಿದೆ. ‘ಗಾಳಿ ಮಳೆಗೆ ಬಿದ್ದಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ಮಳೆ ಅನಾಹುತದಿಂದ ಹಾನಿಗೆ ಒಳಗಾದ ಪ್ರದೇಶಗಳಲ್ಲಿ ತುರ್ತು ಪರಿಹಾರ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದರು.