ಮನೆ ಪೌರಾಣಿಕ ದುಷ್ಟ ಜಯದ್ರಥನ ವಧೆ

ದುಷ್ಟ ಜಯದ್ರಥನ ವಧೆ

0

ಇದು ಮಹಾಭಾರತ ಕಾಲದ ವಿಷಯವಾಗಿದೆ. ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರ ನಡುವೆ ಭೀಷಣ ಯುದ್ಧವು ನಡೆಯುತ್ತಿತ್ತು. ಕೌರವರು ತಮ್ಮ ಯೋಧರ ಜೊತೆಗೆ ಸೇರಿ ಯುದ್ಧದಲ್ಲಿ ಯಾವ ರೀತಿ ಸಂಚನ್ನು ಮಾಡಿದರು ಎಂದರೆ ಅದರ ಮೂಲಕ ಅವರು ಅರ್ಜುನನನ್ನು ಯುದ್ಧಭೂಮಿಯಿಂದ ಬಹಳ ದೂರ ಕೊಂಡೊಯ್ದರು. ಅರ್ಜುನನು ಯುದ್ಧಭೂಮಿಯಿಂದ ದೂರ ಹೋದ ನಂತರ ಕೌರವರು ಚಕ್ರವ್ಯೂಹವನ್ನು ರಚಿಸಿದರು. ಯುದ್ಧದಲ್ಲಿ ಶತ್ರುವನ್ನು ಸುತ್ತುವರಿಯಲು ಸೈನ್ಯವನ್ನು ಒಂದು ವಿಶಿಷ್ಟ ರೀತಿಯಲ್ಲಿ ನಿಲ್ಲಿಸಲಾಗುತ್ತದೆ. ಇದಕ್ಕೆ ಚಕ್ರವ್ಯೂಹ ಎನ್ನುತ್ತಾರೆ. ಇದರೊಳಗೆ ನುಗ್ಗಲು ಮತ್ತು ಹೊರಬರಲು ಕೇವಲ ಅರ್ಜುನನಿಗೆ ಮಾತ್ರ ಗೊತ್ತಿದೆ ಎಂಬ ವಿಷಯ ಕೌರವರಿಗೆ ತಿಳಿದಿತ್ತು. ಹಾಗಾಗಿ ಅರ್ಜುನನ ಅನುಪಸ್ಥಿತಿಯಲ್ಲಿ ಚಕ್ರವ್ಯೂಹದ ರಚನೆಯನ್ನು ಮಾಡಲಾಯಿತು. ಅರ್ಜುನನ ಪುತ್ರನಾದ ಅಭಿಮನ್ಯು ಚಕ್ರವ್ಯೂಹದೊಳಗೆ ಹೋಗಲು ಕಲಿತಿದ್ದನು. ಆದರೆ ಚಕ್ರವ್ಯೂಹದಿಂದ ಹೊರಬರಲು ಅವನಿಗೆ ತಿಳಿಯುತ್ತಿರಲಿಲ್ಲ. ಏಕೆಂದರೆ ಅಭಿಮನ್ಯುವು ತನ್ನ ತಾಯಿಯ ಹೊಟ್ಟೆಯಲ್ಲಿದ್ದಾಗ, ಅರ್ಜುನನು ಸುಭದ್ರೆಗೆ ಚಕ್ರವ್ಯೂಹದ ಬಗ್ಗೆ ಹೇಳುತ್ತಿದ್ದನು. ಆದರೆ ಚಕ್ರವ್ಯೂಹದ ಒಳಗೆ ಹೋಗುವುದನ್ನು ತಿಳಿಸಿದ ನಂತರ ಸುಭದ್ರೆಯು ನಿದ್ದೆ ಮಾಡಿದಳು. ಹಾಗಾಗಿ ಅದರಿಂದ ಹೊರಗೆ ಬರುವುದು ಹೇಗೆ ಎಂದು ಅವಳು ಕೇಳಿಕೊಳ್ಳಲಿಲ್ಲ. ಹಾಗಾಗಿ ಅಭಿಮನ್ಯುವಿಗೆ ಕೇವಲ ಚಕ್ರವ್ಯೂಹವನ್ನು ಭೇದಿಸಿ ಒಳಗೆ ಹೋಗಲು ತಿಳಿದಿತ್ತು, ಆದರೆ ಹೊರಗೆ ಬರಲು ತಿಳಿದಿರಲಿಲ್ಲ.

ಈ ಮಾತನ್ನು ಅಭಿಮನ್ಯುವು ಪಾಂಡವರಿಗೆ ತಿಳಿಸಿದಾಗ, ಇತರ ಪಾಂಡವರು, ಅವನಿಗೆ ನೀನು ಯಾವ ದ್ವಾರದಿಂದ ಒಳಗೆ ಹೋಗುವಿಯೋ ಆ ದ್ವಾರದ ಬಳಿ ನಾವೆಲ್ಲರೂ ನಿಲ್ಲುತ್ತೇವೆ. ಹಾಗೂ ಅದನ್ನು ಮುಚ್ಚಲು ಬಿಡುವುದಿಲ್ಲ. ಆಗ ನೀನು ಸುಲಭವಾಗಿ ಚಕ್ರವ್ಯೂಹದಿಂದ ಹೊರಗೆ ಬರಬಹುದು. ಎಂದು ಹೇಳುತ್ತಾರೆ. ಆಗ ಕೌರವರು ರಚಿಸಿದ ಚಕ್ರವ್ಯೂಹದೊಳಗೆ ಅಭಿಮನ್ಯುವು ಸುಲಭವಾಗಿ ಪ್ರವೇಶಿಸುತ್ತಾನೆ. ಆದರೆ ಜಯದ್ರಥನು ಇತರ ಪಾಂಡವರೊಂದಿಗೆ ಯುದ್ಧ ಮಾಡಿದನು ಮತ್ತು ಅವರಿಗೆ ಅಭಿಮನ್ಯುವಿನ ಸಹಾಯಕ್ಕಾಗಿ ಹೋಗಲು ಬಿಡಲಿಲ್ಲ. ಕೊನೆಗೆ ಅಭಿಮನ್ಯುವು ಚಕ್ರವ್ಯೂಹದಿಂದ ಹೊರಗೆ ಬರಲು ಆಗಲಿಲ್ಲ. ಅವನು ಒಬ್ಬಂಟಿಯಾಗಿ ಒಳಗೆ ಸಿಲುಕಿದ ಹಾಗೂ ಎಲ್ಲ ಕೌರವರು ಒಟ್ಟಾಗಿ ಅವರ ಜೊತೆಗೆ ಯುದ್ಧ ಮಾಡಿದನು. ಯುದ್ಧವನ್ನು ಮಾಡುತ್ತಾ ಅವನು ನಿಶ್ಶಸ್ತ್ರನಾದನು ಹಾಗೂ ಎಲ್ಲ ಕೌರವರು ಅವನನ್ನು ಸುತ್ತುವರಿದು ಅವನೊಂದಿಗೆ ಯುದ್ಧದ ನಿಯಮಕ್ಕೆ ವಿರುದ್ಧವಾಗಿ ಹೋರಾಡಿದರು. ಕೊನೆಗೆ ಕೌರವರು ಅಭಿಮನ್ಯುವಿನ ಹತ್ಯೆಯನ್ನು ಮಾಡಿದರು. ಧರ್ಮಕ್ಕಾಗಿ ಹೋರಾಡಿದ ಅವನಿಗೆ ವೀರಗತಿ ಪ್ರಾಪ್ತವಾಯಿತು. ಅವನ ಮೃತ್ಯುವಿನ ನಂತರ ಪಾಂಡವರನ್ನು ತುಂಬಾ ದ್ವೇಷಿಸುತ್ತಿದ್ದ ಜಯದ್ರಥನು ಅಭಿಮನ್ಯುವಿನ ತಲೆಯನ್ನು ಒದೆಯುವ ಮೂಲಕ ಇನ್ನಷ್ಟು ಅವಮಾನ ಮಾಡಿದನು.

ಅಭಿಮನ್ಯುವಿನ ಮೃತ್ಯುವಾದ ವಿಷಯ ಕೇಳಿ ಅರ್ಜುನನ ಪುತ್ರಶೋಕದಿಂದ ಅತ್ಯಂತ ವ್ಯಾಕುಲನಾಗುತ್ತಾನೆ. ತನ್ನ ಪುತ್ರನ ಮೃತ್ಯುವಿಗಿಂತಲೂ ಹೆಚ್ಚು ಅವನಿಗೆ ಜಯದ್ರಥನ ಕೀಳುಮಟ್ಟದ ಕೃತಿಯ ಬಗ್ಗೆ ಹೆಚ್ಚು ಕ್ರೋಧ ಉಂಟಾಗಿತ್ತು. ಆಗ ಅರ್ಜುನನು, ನಾಳೆ ಸೂರ್ಯಾಸ್ತವಾಗುವುದರ ಒಳಗೆ ನಾನು ಜಯದ್ರಥನನ್ನು ವಧಿಸುವೆನು. ಒಂದು ವೇಳೆ ಹೀಗೆ ಮಾಡಲು ಆಗಿದಿದ್ದಲ್ಲಿ ನಾನು ನನ್ನನ್ನು ಅಗ್ನಿಗೆ ಸಮರ್ಪಿಸಿಕೊಳ್ಳುವೆನು (ಬೆಂಕಿಯಲ್ಲಿ ಜೀವಂತವಾಗಿ ಪ್ರವೇಶ ಮಾಡಿ ಮರಣ ಹೊಂದುವೆ) ಎಂಬ ಕಠೋರ ಪ್ರತಿಜ್ಞೆಯನ್ನು ಸಹ ಮಾಡುತ್ತಾನೆ. ಈ ವಿಷಯವನ್ನು ಕೇಳಿ ಜಯದ್ರಥ ಮತ್ತು ಕೌರವರು ಬಹಳ ಹೆದರಿಹೋದರು. ಜಯದ್ರಥನನ್ನು ವಧಿಸುವುದು ಅರ್ಜುನನಿಗೇನೂ ದೊಡ್ಡ ವಿಷಯವಾಗಿರಲಿಲ್ಲ. ಜಯದ್ರಥನು ದುರ್ಯೋಧನನ ಸಹೋದರಿಯ ಪತಿಯಾಗಿದ್ದನು. ಅವನ ರಕ್ಷಣೆಗಾಗಿ ಕೌರವರು ಅವನ ಸುತ್ತಲೂ ಮಹಾನ್ ಯೋಧರ ದೊಡ್ಡ ಕವಚವನ್ನೇ ನಿಲ್ಲಿಸಿಬಿಟ್ಟರು. ಮಧ್ಯಾಹ್ನದ ತನಕ ಅರ್ಜುನನು ಆ ಸೈನಿಕರ ಜೊತೆಗೆ ಹೋರಾಡುತ್ತಿದ್ದನು. ಆದರೆ ಅಲ್ಲಿ ಎಲ್ಲಿಯೂ ಜಯದ್ರಥನು ಕಾಣಿಸುತ್ತಿರಲಿಲ್ಲ. ಸೂರ್ಯಾಸ್ತವಾಗಲು ಹೆಚ್ಚು ಸಮಯ ಉಳಿದಿರಲಿಲ್ಲ. ಆದರೆ ಜಯದ್ರಥನ ಸುಳಿವೇ ಇರಲಿಲ್ಲ.

ಮಕ್ಕಳೇ ನಮಗೆಲ್ಲ ಗೊತ್ತಿದೆ, ಭಗವಂತನು ತನ್ನ ಭಕ್ತರ ರಕ್ಷಣೆಯನ್ನು ಮಾಡುತ್ತಾನೆ. ಅರ್ಜುನನು ಸಹ ಶ್ರೀಕೃಷ್ಣನ ಭಕ್ತನಾಗಿದ್ದನು. ಹಾಗಾಗಿ ಅವನಿಗೆ ತನ್ನ ಭಕ್ತನಾದ ಅರ್ಜುನನ ಪ್ರತಿಜ್ಞೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಹಾಗೂ ಕೌರವರು ಅರ್ಜುನನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ಆಗದಂತೆ ಪ್ರಯತ್ನ ಮಾಡುತ್ತಾರೆಂಬುದು ಸಹ ಕೃಷ್ಣನಿಗೆ ಗೊತ್ತಿತ್ತು. ಅರ್ಜುನನ ಪ್ರತಿಜ್ಞೆ ಪೂರ್ಣವಾಗದಿದ್ದರೆ ಕೌರವರಿಗೆ ಲಾಭವಾಗುತ್ತದೆ ಎಂದು ಸಹ ಶ್ರೀಕೃಷ್ಣನಿಗೆ ಗೊತ್ತಿತ್ತು. ಅರ್ಜುನನು ಸೂರ್ಯಾಸ್ತವಾಗುವುದರೊಳಗೆ ಜಯದ್ರಥನ ವಧೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದನು. ಎಲ್ಲಿಯ ತನಕ ಸೂರ್ಯನು ಆಕಾಶದಲ್ಲಿ ಕಾಣಿಸುತ್ತಾನೆಯೋ ಅಲ್ಲಿಯ ತನಕ ಜಯದ್ರಥನು ಅರ್ಜುನನ ಎದುರು ಬರಲಾರನು ಎಂದು ಶ್ರೀಕೃಷ್ಣನಿಗೆ ಅರಿವಾಯಿತು ಹಾಗೂ ಅವರು ತಮ್ಮ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಚಿದರು. ಸೂರ್ಯನು ಕಾಣಿಸದೇ ಇದ್ದಾಗ ಎಲ್ಲರೂ ಸೂರ್ಯಾಸ್ತವಾಯಿತು ಎಂದು ತಿಳಿದುಕೊಂಡರು.

ತನ್ನ ಪ್ರತಿಜ್ಞೆಗನುಸಾರ ಸೂರ್ಯಾಸ್ತದೊಳಗೆ ಅರ್ಜುನನು ಜಯದ್ರಥನನ್ನು ಕೊಲ್ಲದಿದ್ದರೆ ಅಗ್ನಿಪ್ರವೇಶ ಮಾಡಬೇಕಿತ್ತು. ಹಾಗಾಗಿ ಅರ್ಜುನನಿಗಾಗಿ ಕಟ್ಟಿಗೆಗಳ ಚಿತೆಯನ್ನು ತಯಾರಿಸಲಾಯಿತು ಹಾಗೂ ಅದಕ್ಕೆ ಬೆಂಕಿ ಸಹ ಹಚ್ಚಲಾಯಿತು. ಕೌರವರು ಮತ್ತು ಪಾಂಡವರು ಎಲ್ಲರೂ ಒಟ್ಟಿಗೆ ಆ ಜಾಗದಲ್ಲಿ ಒಟ್ಟು ಸೇರಿದರು. ಜಯದ್ರಥ ಹಾಗೂ ಎಲ್ಲ ಕೌರವರು ಅರ್ಜುನನ ಪ್ರತಿಜ್ಞೆ ಪೂರ್ಣವಾಗಲಿಲ್ಲ ಹಾಗೂ ಅವನು ಈಗ ಅಗ್ನಿಪ್ರವೇಶ ಮಾಡಬೇಕು ಎಂದು ಬಹಳ ಸಂತೋಷದಲ್ಲಿದ್ದರು. ಎಲ್ಲ ಪಾಂಡವರು ಅರ್ಜುನನ ಅಗ್ನಿಪ್ರವೇಶದ ಪ್ರತಿಜ್ಞೆಯಿಂದ ಬಹಳ ದುಃಖಿಯಾಗಿದ್ದರು. ಅರ್ಜುನನು ಅತ್ಯುತ್ತಮ ಬಿಲ್ಲುಗಾರನಾಗಿದ್ದನು. ಅವನಿಗೆ ತನ್ನ ‘ಗಾಂಡೀವ’ ದನುಷ್ಯವು ಬಹಳ ಪ್ರಿಯವಾದುದಾಗಿತ್ತು. ಸುಡುವ ಚಿತೆಯಲ್ಲಿ ಪ್ರವೇಶ ಮಾಡುವ ಮೊದಲು ಅರ್ಜುನನು ತನ್ನ ಧನುಷ್ಯಬಾಣವನ್ನು ಎತ್ತಿದನು ಮತ್ತು ಭಗವಂತ ಶ್ರೀಕೃಷ್ಣನಿಗೆ ನಮಸ್ಕರಿಸಿದನು. ಅವನು ಅಗ್ನಿಗೆ ಸಹ ನಮಸ್ಕಾರ ಮಾಡಿದನು ಮತ್ತು ಪ್ರಾರ್ಥನೆಯನ್ನು ಮಾಡಿದನು. ಶ್ರೀಕೃಷ್ಣನು ಅತ್ಯಂತ ಪ್ರೇಮದಿಂದ ತನ್ನ ಶಿಷ್ಯನತ್ತ ನೋಡಿದನು ಮತ್ತು ಅದೇ ಸಮಯದಲ್ಲಿ ಸೂರ್ಯನಿಗೆ ಅಡ್ಡ ಹಿಡಿದಿದ್ದ ಸುದರ್ಶನ ಚಕ್ರವನ್ನು ಸರಿಸಿದನು. ಇದರಿಂದ ಎಲ್ಲೆಡೆ ಸೂರ್ಯಪ್ರಕಾಶ ಹರಡಿತು.

ಕೆಲವು ಕ್ಷಣಗಳ ಕಾಲ ಯಾರಿಗೂ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಇನ್ನೂ ಸೂರ್ಯಾಸ್ತವಾಗಿಲ್ಲ, ಈ ವಿಷಯ ಗಮನಕ್ಕೆ ಬಂದೊಡನೆ ಕೌರವ ಸೇನೆಯಲ್ಲಿ ಕೋಲಾಹಲ ಉಂಟಾಯಿತು. ಜಯದ್ರಥನು ದಿಙ್ಮೂಡನಾಗಿ ನಿಂತಲ್ಲಿಯೇ ನಿಂತಿದ್ದನು. ಅಷ್ಟರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ, ‘ಅರ್ಜುನಾ, ಏನು ನೋಡುತ್ತಿರುವೆ, ಧನುಷ್ಯಕ್ಕೆ ಬಾಣ ಹೂಡು, ಇನ್ನೂ ಸೂರ್ಯಾಸ್ತವಾಗಿಲ್ಲ. ಅಲ್ಲಿ ನೋಡು ಸೂರ್ಯ, ಇಲ್ಲಿ ನೋಡು ನಿನ್ನೆದುರು ಜಯದ್ರಥ. ವಧಿಸು ಅವನನ್ನ’ ಎಂದು ಆದೇಶಿಸಿದನು. ಅರ್ಜುನನು ಒಂದು ಕ್ಷಣ ಸಹ ತಡ ಮಾಡದೇ ಜಯದ್ರಥನ ತಲೆಯನ್ನು ದೇಹದಿಂದ ಬೇರ್ಪಡಿಸಿಬಿಟ್ಟನು. ಈ ರೀತಿ ದುಷ್ಟ ಜಯದ್ರಥನ ವಧೆಯಾಯಿತು ಮತ್ತು ಅರ್ಜುನನ ಪ್ರತಿಜ್ಞೆಯು ಸಹ ಪೂರ್ಣವಾಯಿತು. ಬಾಲಮಿತ್ರರೇ ಅರ್ಜುನನು ಶ್ರೀಕೃಷ್ಣನ ಪರಮಾಪ್ತ ಭಕ್ತನಾಗಿದ್ದನು. ಹಾಗೂ ಧರ್ಮಕ್ಕನುಸಾರ ಆಚರಣೆಯನ್ನು ಮಾಡುತ್ತಿದ್ದನು. ಅವನು ಅಖಂಡವಾಗಿ ಶ್ರೀಕೃಷ್ಣ ನಾಮಜಪವನ್ನು ಮಾಡುತ್ತಿದ್ದನು ಮತ್ತು ಧರ್ಮಕ್ಕನುಸಾರ ಆಚರಣೆಯನ್ನು ಮಾಡುತ್ತಿದ್ದ ಕಾರಣ ಭಗಾವಾನ ಶ್ರೀಕೃಷ್ಣನು ಅವರ ಪಕ್ಷದಲ್ಲಿದ್ದನು. ಭಗಾವಾನ ಶ್ರೀಕೃಷ್ಣ ಕೃಪೆಯಿಂದಲೇ ಅರ್ಜುನನಿಗೆ ಜಯದ್ರಥನಂತಹ ದುಷ್ಟನನ್ನನು ವಧಿಸಲು ಸಾಧ್ಯವಾಯಿತು. ತಾವು ಸಹ ನಾಮಜಪ ಮಾಡಿ ಭಗವಂತನಿಗೆ ಪ್ರಿಯ ಭಕ್ತರಾಗಲು ಮತ್ತು ಭಗವಂತನ ಕೃಪೆಯನ್ನು ಸಂಪಾದಿಸಿರಿ.