ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಡ್ಯಾಂ ಒಳಹರಿವು ಪ್ರಮಾಣದಲ್ಲಿ ಅಲ್ಪ ಏರಿಕೆಯಾಗಿದೆ.
ಡ್ಯಾಂಗೆ 6278 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನಿಂದ 411 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಒಳಹರಿವು ಪ್ರಮಾಣ ಏರಿಕೆ ಹಿನ್ನಲೆ ಡ್ಯಾಂನ ನೀರು ಸಂಗ್ರಹ ಸ್ವಲ್ಪ ಹೆಚ್ಚಳವಾಗಿದೆ.
91.20 ಅಡಿಗೆ ಕೆ.ಆರ್.ಎಸ್ ಡ್ಯಾಂ ನೀರು ಏರಿಕೆ ಕಂಡಿದೆ. 124.80 ಗರಿಷ್ಠ ಮಟ್ಟದ ಡ್ಯಾಂ ಇದಾಗಿದ್ದು, 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 16.690 ಟಿಎಂಸಿ ನೀರು ಸಂಗ್ರಹವಿದೆ.
ಕೆಆರ್ ಎಸ್ ಅಣೆಕಟ್ಟೆಯಿಂದ ನದಿ-ನಾಲೆಗಳಿಗೆ ನೀರು ಬಿಡುಗಡೆ
ಶುಕ್ರವಾರ ರಾತ್ರಿಯಿಂದ ಕೃಷ್ಣರಾಜಸಾಗರ ಜಲಾಶಯದಿಂದ ನದಿ ಮತ್ತು ನಾಲೆಗಳ ಮುಖಾಂತರ ನೀರು ಹರಿಸಲಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವುದಕ್ಕೆ ಮಿತವಾಗಿ ಬಳಸುವಂತೆ ಕಾವೇರಿ ನೀರಾವರಿ ನಿಗಮ ಮನವಿ ಮಾಡಿದೆ.
ಈ ಸಂಬಂಧ ಕಾವೇರಿ ನೀರಾವರಿ ನಿಗಮ ನಿಯಮತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯು ಜುಲೈ ಮಾಹೆಯಲ್ಲಿ ಪ್ರಾರಂಭವಾಗಿದ್ದು, ಮಳೆಯ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳಹರಿವು ಕ್ಷೀಣಿಸಿರುತ್ತದೆ.
ಪ್ರಸ್ತುತ ಸದರಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಶೇಕಡಾ 32.10 ರಷ್ಟು ಮಾತ್ರ ಇರುತ್ತದೆ ಎಂದಿದೆ.
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 204 ಸಂಖ್ಯೆಯ ಕೆರೆಗಳಿದ್ದು, ಇವುಗಳ ಸಂಗ್ರಹಣಾ ಸಾಮರ್ಥ್ಯ 5.8 ಟಿ.ಎಂ.ಸಿ. ಇರುತ್ತದೆ. ಬಹುತೇಕ ಕೆರೆಗಳು ಖಾಲಿಯಿದ್ದು, ಶೇಕಡಾ 20 ಕ್ಕಿಂತಲೂ ಕಡಿಮೆ ನೀರಿನ ಸಂಗ್ರಹಣೆ ಇರುತ್ತದೆ. ಆದುದರಿಂದ, ಮೈಸೂರು, ಮಂಡ್ಯ ರಾಮನಗರ ಮತ್ತು ಬೆಂಗಳೂರು ಹಾಗೂ ಇತರೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲು ನಾಲೆಗಳು ಮತ್ತು ನದಿಗಳ ಮುಖಾಂತರ ಜು.21 ರಿಂದ ಸುಮಾರು 10 ದಿನಗಳವರೆಗೆ ಮಾತ್ರ ನೀರನ್ನು ಹರಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿ ನಿರ್ದೇಶಿಸಲಾಗಿರುತ್ತದೆ ಎಂದು ತಿಳಿಸಿದೆ.