ಮನೆ ಸ್ಥಳೀಯ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಸಿಎಂ ಸಿದ್ದರಾಮಯ್ಯ ತವರಿನಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಗ್ರಾಮದ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ವರದಿಯಾಗಿದೆ.

Join Our Whatsapp Group

ಗ್ರಾಮದ ಯಜಮಾನರು ದಲಿತ ಸಮುದಾಯದ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಯಜಮಾನರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹದೇವ್ ಬಹಿಷ್ಕಾರ ಹಾಕಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ಸಂಬಂಧ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ ಮನೆಯ ವಸ್ತುಗಳನ್ನು ಹಾಳು ಮಾಡಿದ್ದರು. ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ದಂಡ ಹಾಕಲಾಗಿತ್ತು. ಪ್ರಮೋದ್ ಗೆ 25,000 ಹಾಗೂ ಸುರೇಶ್​ಗೆ 15000 ರೂಪಾಯಿ ದಂಡ ವಿಧಿಸಿದ್ದರು.

ಆದರೆ, ನ್ಯಾಯ ಪಂಚಾಯಿತಿ ಬಗ್ಗೆ ತಗಾದೆ ತೆಗೆದಿದ್ದ ಸುರೇಶ್, ತಮಗೆ ಅನ್ಯಾಯವಾಗಿದ್ದರಿಂದ ದಂಡದ ಮೊತ್ತ ಪಾವತಿಸುವುದಿಲ್ಲ ಎಂದು ಹೇಳಿದ್ದರು. ಇದರಿಂದ ಕೆರಳಿದ ಯಜಮಾನರು, ನ್ಯಾಯ ಪಂಚಾಯಿತಿ ವಿಚಾರದಲ್ಲಿ ತಮಗೆ ಮುಜುಗರ ಆಗಿದೆ ಎಂದು ಸುರೇಶ್ ಮೇಲೆ ಸಿಟ್ಟಾಗಿದ್ದಾರೆ. ಅದೇ ಕೋಪದಲ್ಲಿ, ತಪ್ಪು ಕಾಣಿಕೆ ಕಟ್ಟುವವರೆಗೂ ತಮ್ಮ ಕುಲಕ್ಕೆ ಸೇರಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ.

ಪೊಲೀಸರು, ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಸಿಗದ ನ್ಯಾಯ

ಸುರೇಶ್ ಹಾಗೂ ಅವರ ತಾಯಿ ಮಹದೇವಮ್ಮ ಇಬ್ಬರನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಹಬ್ಬ, ಸಾವು-ನೋವುಗಳ ಆಚರಣೆ ವಿಚಾರದಲ್ಲೂ ಬಹಿಷ್ಕಾರ ಹಾಕಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ, ಪೊಲೀಸರು, ತಹಶೀಲ್ದಾರ್​ಗೆ ಈಗಾಗಲೇ ದೂರು ನೀಡಿದ್ದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ.

ಸುರೇಶ್ ಕುಟುಂಬದ ಜೊತೆ ಯಾರೇ ಸಂಪರ್ಕಕ್ಕೆ ಬಂದರೂ 5,000 ರೂ. ದಂಡ ವಿಧಿಸಬೇಕು

\ ಎಂದು ಗ್ರಾಮದ ಯಜಮಾನರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.