ಮನೆ ಕಾನೂನು ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ: ಸಾಮಾಜಿಕ ಕಾರ್ಯಕರ್ತನಿಗೆ 90 ದಿನಗಳ ಕಾರಾಗೃಹ ಶಿಕ್ಷೆ

ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ: ಸಾಮಾಜಿಕ ಕಾರ್ಯಕರ್ತನಿಗೆ 90 ದಿನಗಳ ಕಾರಾಗೃಹ ಶಿಕ್ಷೆ

0

ಮಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆಯನ್ನು ಮಂಗಳೂರಿನ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

Join Our Whatsapp Group

ನ್ಯಾಯಾಲಯವು ಹೊರಡಿಸಿದ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಲಿಂಗಪ್ಪ ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಶ್ರೀ ವಿಠೋಬ ರುಕುಮಾಯಿ ದೇವರ ಭಂಡಾರದ ದಿನನಿತ್ಯದ ಆಡಳಿತಾತ್ಮಕ ವ್ಯವಹಾರದಲ್ಲಿ ಹಸ್ತಕ್ಷೇಪವನ್ನುಂಟು ಮಾಡಬಾರದು ಹಾಗೂ ಟ್ರಸ್ಟಿ ಎಂದು ತನ್ನನ್ನು ತಾನು ಪ್ರತಿಪಾದಿಸಬಾರದು ಎಂದು ಹನುಮಂತ ಕಾಮತ್ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ದೇವರ ಭಂಡಾರದ ಟ್ರಸ್ಟಿ ವರದಾಯ ಪ್ರಭು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಹನುಮಂತ ಕಾಮತ್ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಹೊರಡಿಸಿತ್ತು.

ಈ ಆದೇಶದ ವಿರುದ್ಧ ಹನುಮಂತ ಕಾಮತ್ ಸಲ್ಲಿಸಿದ ಮೇಲ್ಮನವಿ ತಿರಸ್ಕೃತವಾಗಿತ್ತು. ಆದರೆ ಹನುಮಂತ ಕಾಮತ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಾನೇ ಭಂಡಾರದ ಟ್ರಸ್ಟಿ ಎಂದು ಘೋಷಣೆ ಮಾಡಿಕೊಂಡು ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುತ್ತಿದ್ದರು. ಇದರ ವಿರುದ್ಧ ವರದಾಯ ಪ್ರಭು ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಹನುಮಂತ ಕಾಮತ್ ಉದ್ದೇಶಪೂರ್ವಕವಾಗಿ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ತೀರ್ಮಾನಿಸಿ 90 ದಿನಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಶನಿವಾರ ತೀರ್ಪು ನೀಡಿದೆ. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಪಿ. ರಂಜನ್ ರಾವ್ ವಾದಿಸಿದರು.