ಮನೆ ರಾಜ್ಯ ಎಲ್ ಜಿಬಿಟಿಕ್ಯೂ ಸಮುದಾಯದ ಪರ ಸಮಾಜ ನಿಲ್ಲಬೇಕಾಗಿದೆ:  ಸಚಿವ ದಿನೇಶ್ ಗುಂಡೂರಾವ್

ಎಲ್ ಜಿಬಿಟಿಕ್ಯೂ ಸಮುದಾಯದ ಪರ ಸಮಾಜ ನಿಲ್ಲಬೇಕಾಗಿದೆ:  ಸಚಿವ ದಿನೇಶ್ ಗುಂಡೂರಾವ್

0

ಬೆಂಗಳೂರು: ತೃತೀಯ ಲಿಂಗಿಗಳು, ಸಲಿಂಗ ಕಾಮಿಗಳನ್ನೊಳಗೊಂಡ ಎಲ್ ಜಿಬಿಟಿಕ್ಯೂ ಸಮುದಾಯದ ಕುರಿತು ನಕಾರಾತ್ಮಕ ಧೋರಣೆಗಳನ್ನು ಹೊಂದದೆ ಅವರನ್ನು ಮುಖ್ಯ ವಾಹಿನಿಗೆ ಕರೆತರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Join Our Whatsapp Group

ಎಲ್ ಜಿಬಿಟಿಕ್ಯೂ ಸಮುದಾಯದ ಪರವಾಗಿರುವ ಇರೈವಿ ಚಾರಿಟೆಬಲ್ ಟ್ರಸ್ಟ್ ಮತ್ತು ನಮ್ಮ ಬೆಂಗಳೂರು ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಆವೃತ್ತಿಯ ಎಲ್‌ಜಿಬಿಟಿಕ್ಯೂ ಈಕ್ವಾಲಿಟಿ ಪ್ರೈಡ್ ಮ್ಯಾರಾಥಾನ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಬಗ್ಗೆಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಮ್ಯಾರಥಾನ್ ಸ್ವಾಗತಾರ್ಹ ಎಂದರು.

ತೃತೀಯ ಲಿಂಗಿಗಳು ಪ್ರಕೃತಿಯ ಸೃಷ್ಟಿಯಾದರೆ, ಸಲಿಂಗ ಕಾಮಿಗಳು ಸ್ವ ಇಚ್ಛೆಯಿಂದ ಎಲ್ ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದ್ದಾರೆ. ಇವರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದು, ಸುಪ್ರೀಂ ಕೋರ್ಟ್ ಕೂಡ ಇವರ ಪರ ತೀರ್ಪು ನಾಡಿದೆ. ಆದರೆ, ಸಮಾಜ ಸಾಕಷ್ಟು ಮುಂದುವರಿದಿದ್ದರೂ ಜನರು ಮಾತ್ರ ಈ ಸಮುದಾಯವನ್ನು ತಿರಸ್ಕಾರ ಮನೋಭಾವ ಮತ್ತು ನಕಾರಾತ್ಮಕ ಧೋರಣೆಯಿಂದ ನೋಡುತ್ತಿದ್ದಾರೆ. ಇದನ್ನು ತಪ್ಪಿಸಿ ಅವರೂ ಸಮಾಜದ ಮುಖ್ಯ ವಾಹಿನಿಗೆ ಸೇರಿದವರು ಎಂದು ಪರಿಗಣಿಸುಂತಾಗಬೇಕು ಎಂದು ತಿಳಿಸಿದರು.

ತೃತೀಯ ಲಿಂಗಿಗಳು, ಸಲಿಂಗ ಕಾಮಿಗಳನ್ನು ಅವರ ಕುಟುಂಬದವರೂ ಒಪ್ಪಿಕೊಳ್ಳುವುದಿಲ್ಲ ಮತ್ತು ಮನೆಯಲ್ಲಿ ಇರಲು ಅವಕಾಶ ನೀಡುವುದಿಲ್ಲ. ಇದರಿಂದಾಗಿ ಆ ಸಮುದಾಯ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ಎದುರಿಸುವಂತಾಗುತ್ತದೆ. ತಾವು ಸಲಿಂಗ ಕಾಮಿಗಳು ಎಂದು ಸಮಾಜದಲ್ಲಿ ಧೈರ್ಯವಾಗಿ ಹೇಳಿಕೊಳ್ಳುವ ಪರಿಸ್ಥಿಯಲ್ಲೂ ಆ ಸಮುದಾಯ ಇರುವುದಿಲ್ಲ. ಅವರ ಇಚ್ಛೆಯಂತೆ ಇರುವ ಸಮುದಾಯವನ್ನು ಸಮಾಜ ತಿರಸ್ಕಾರ ಭಾವನೆಯಿಂದ ನೋಡಬಾರದು ಎಂದು ಕಿವಿಮಾತು ಹೇಳಿದರು.

ಎಲ್ ಜಿಬಿಟಿಕ್ಯೂ ಸಮುದಾಯದ ಪರವಾಗಿ ಇರೈವಿ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ಇತರೆ ಸರ್ಕಾರೇತರ ಸಂಘಟನೆಗಳು ನಿಲ್ಲುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಎಲ್ ಜಿಬಿಟಿಕ್ಯೂ ಸಮುದಾಯದ ಪರವಾಗಿ ನವೆಂಬರ್ ನಲ್ಲಿ ಪ್ರೈಡ್ ಮ್ಯಾರಥಾನ್ ನಡೆಸಲು ಈ ಸಂಘಟನೆಗಳು ಉದ್ದೇಶಿಸಿದ್ದು, ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಇರೈವಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕರಾದ ವಿಜಯ ಮೇರಿ, ಸಿಇಒ ಝೆಹ್ರಾ ಫಾತಿಮಾ, ರಾಜ್ಯ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷ ಡಾ.ಮಸೂದ್ ಫೌಜ್ ದಾರ್, ಸ್ಪರ್ಷ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ವಿಭಾಗದ ಮುಖ್ಯಸ್ಥ ಡಾ.ಜಾನ್ ಪೌಲ್ ಎಂ., ಎನ್ ಬಿಎಸ್ ಎಸ್ ವೈದ್ಯಕೀಯ ವಿಭಾಗದ ಡಾ.,ಸೋಮಶೇಖರ್, ಮಹಾವೀರ್ ಐಎಲ್ಎಲ್ಎಎಂನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಜಿ.ರಘುರಾಮ್, ಕಾನ್ಫಿಡೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶೃತಿ ಎಚ್.ಆರ್., ಕಾಂಗ್ರೆಸ್ ಮುಖಂಡರಾದ ನೀಲು ಸೈಯದ್, ತೃತೀಯಲಿಂಗಿಗಳ ಪರ ಹೋರಾಟಗಾರರಾದ ಆರ್. ಯುಕ್ತಿ, ಇರೈವಿ ಸಂಸ್ಥೆಯ ಸಯೀದಾ ಕೌಸರ್ ಸಲ್ಮಾ ಮತ್ತಿತರರು ಪಾಲ್ಗೊಂಡಿದ್ದರು.