ಮನೆ ರಾಜ್ಯ ನಾಡಪ್ರಭು ಕೆಂಪೇಗೌಡರ ಥೀಮ್‌ ಪಾರ್ಕ್‌ ಗೆ ರಾಜ್ಯದೆಲ್ಲೆಡೆ ಮಣ್ಣು ಸಂಗ್ರಹ: 45 ದಿನಗಳ ಅಭಿಯಾನ

ನಾಡಪ್ರಭು ಕೆಂಪೇಗೌಡರ ಥೀಮ್‌ ಪಾರ್ಕ್‌ ಗೆ ರಾಜ್ಯದೆಲ್ಲೆಡೆ ಮಣ್ಣು ಸಂಗ್ರಹ: 45 ದಿನಗಳ ಅಭಿಯಾನ

0

ಬೆಂಗಳೂರು (Bengaluru): ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ನೆನಪನ್ನು ಅಜರಾಮರಗೊಳಿಸಲು ರಾಜ್ಯ ಸರ್ಕಾರ 45 ದಿನಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿರುವ ಸರ್ಕಾರ ಇದಕ್ಕೆ ಪೂರ್ವಭಾವಿಯಾಗಿ ‘ಉದ್ಘಾಟನಾ ಅಭಿಯಾನ’ವನ್ನು ನಡೆಸಲಿದೆ. ‘ನಾಡ ಕಟ್ಟೋಣ ಬನ್ನಿʼ ಎಂಬ ಘೋಷವಾಕ್ಯದ ಈ ಅಭಿಯಾನಕ್ಕೆ ಸೆ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ರಾಜ್ಯದ 31 ಜಿಲ್ಲೆಗಳಲ್ಲೂ ನಡೆಯಲಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವು ‘ನಾಡ ಕಟ್ಟೋಣ ಬನ್ನಿ’ ಎನ್ನುವ ಘೋಷವಾಕ್ಯವನ್ನು ರೂಪಿಸಿದೆ.

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಲು ನಾಡಪ್ರಭು ಕೆಂಪೇಗೌಡರೇ ಮೂಲ ಕಾರಣ. ಅವರ ಪ್ರತಿಮೆಯ ಉದ್ಘಾಟನೆಯಲ್ಲಿ ಇಡೀ ರಾಜ್ಯದ ಜನರು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಪಾಲ್ಗೊಳ್ಳಬೇಕು ಎನ್ನುವುದು ಸರ್ಕಾರದ ಆಶಯ. ಎಲ್ಲ ಜಿಲ್ಲೆಗಳ ಪ್ರತಿ ಹಳ್ಳಿಯ ಪವಿತ್ರ ಮಣ್ಣನ್ನು ಆಯಾ ಊರುಗಳಲ್ಲಿರುವ ಕೆರೆ ಕಟ್ಟೆ, ಕಲ್ಯಾಣಿ, ನದಿ, ಪುಷ್ಕರಣಿ, ಕೊಳ, ಚಿಲುಮೆ ಮತ್ತು ಝರಿಗಳಿಂದ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ಜತೆಗೆ ನಾಡಿನ ಉದ್ದಗಲಕ್ಕೂ ಇರುವ ಅನುಕರಣೀಯ ಸಾಧಕರ ಮನೆಗಳಿಂದಲೂ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದು, ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದರ ಕುರಿತು ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಗುರುವಾರ ಕಾರ್ಯ ಯೋಜನೆ ಹೊರಬೀಳಲಿದೆ.

ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳ ಸಾಲಿಗೆ 108 ಅಡಿಯ ಕೆಂಪೇಗೌಡರ ಪ್ರತಿಮೆ ಕೂಡ ಸೇರಲಿದ್ದು ಅದಕ್ಕೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.