ಚಿಕ್ಕಮಗಳೂರು (Chikkamagaluru): ಯೋಧನೊಬ್ಬನ ಮೃತದೇಹ ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರಿನ ತಾಲ್ಲೂಕಿನ ಮಸಿಗದ್ದೆಯವರಾದ ಯೋಧ ಎಂ.ಎನ್.ಗಣೇಶ್ (36) ಅವರ ಮೃತದೇಹ ಪತ್ತೆಯಾಗಿದೆ. ಗಣೇಶ್ ಅವರು ಅಸ್ಸಾಂನ ಗುವಾಹಟಿಯಲ್ಲಿ ಸೇನೆಯಲ್ಲಿ ಇದ್ದರು. ಅವರು ಏ.24ರಂದು ಊರಿಗೆ ಬಂದಿದ್ದರು. ಜೂನ್ 9ರಂದು ಊರಿನಿಂದ ಹೋಗಿದ್ದರು.
ಭಾನುವಾರ ನಸುಕಿನಲ್ಲಿ ಅಂಬುಲೆನ್ಸ್ ಸಿಬ್ಬಂದಿಯೊಬ್ಬರು ಫೋನ್ ಮಾಡಿ ಕಿಶನ್‌ಗಂಜ್ ಬಳಿ ರಸ್ತೆ ಬದಿ ಗಣೇಶ್ ಅವರ ಶವ ಪತ್ತೆಯಾಗಿದೆ ಎಂದರು. ಗಣೇಶ್ ಅವರು ಜೂನ್ 9ರಂದು ಊರಿನಿಂದ ಹೋಗಿದ್ದರು. ಏನಾಗಿದೆ ಎಂಬುದು ಗೊತ್ತಿಲ್ಲ. ಜೂ.12ರಂದು ಅವರು ಗುವಾಹಟಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು ಎಂದು ಗಣೇಶ್ ಅವರ ಪತ್ನಿ ಶ್ವೇತಾ ತಿಳಿಸಿದ್ದಾರೆ.
ಗಣೇಶ್ ಅವರು ಮಸಿಗದ್ದೆಯ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರ. ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. 14 ವರ್ಷಗಳಿಂದ ಸೇನೆಯಲ್ಲಿ ಇದ್ದರು. ರಾಜಸ್ತಾನ, ದೆಹಲಿ, ಗೋವಾ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸಿದ್ದರು. ವಿವಾಹವಾಗಿ ಆರು ವರ್ಷವಾಗಿತ್ತು. ಪುತ್ರಿ ಆದ್ಯಾ ಇದ್ದಾರೆ.
ಗಣೇಶ್ ಅವರು ಮಸಿಗದೆಯಿಂದ ವಾಪಸ್ ಗುವಾಹಟಿಗೆ ಸಾಗುವಾಗ ಮೃತಪಟ್ಟಿದ್ದಾರೆ. ಏನಾಯಿತು ಎಂಬುದು ಗೊತ್ತಿಲ್ಲ. ಕಿಶನ್‌ಗಂಜ್ ಪ್ರದೇಶದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದೇವೆ ಸೇನೆಯ ತಂಡದವರು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಪಾರ್ಥಿವ ಶರೀರವನ್ನು ಇನ್ನು ಎರಡು ದಿನದಲ್ಲಿ ಕಳಿಸಬಹುದು. ಸಂಬಂಧಪಟ್ಟವರೊಂದಿಗೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದೇವೆ ಎಂದು ಮಾಹಿತಿ ನೀಡಿದರು.