ಮನೆ ರಾಜ್ಯ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆ: ಶಾಸಕ ಜಿಟಿಡಿ

ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆ: ಶಾಸಕ ಜಿಟಿಡಿ

0

ಮೈಸೂರು: ಮುಂದಿನ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ (ಪೊಲೀಸ್ ಬಡಾವಣೆ) ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಬಡಾವಣೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಬಡಾವಣೆಗಳಿಗೂ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಉಂಡುವಾಡಿ ಯೋಜನೆ ಮೂಲಕ ಕಾವೇರಿ ಹಾಗೂ ಕಬಿನಿ ನೀರನ್ನು ತರುವ ಪ್ರಯತ್ನ ನಡೆದಿದೆ.‌ ಅದಕ್ಕಾಗಿ ೬೦೦ ಕೋಟಿ ರೂಪಾಯಿ ಯೋಜನೆ ಅನುಷ್ಠಾನವಾಗಿದೆ ಎಂದರು.

ಮುಂದಿನ ಆರು ತಿಂಗಳಲ್ಲಿ ಈ ಬಡಾವಣೆಯಲ್ಲಿ ದಿನದ ೨೪ ಗಂಟೆ ಕುಡಿಯುವ ನೀರು ಬರಲಿದೆ. ಅಂತಹ ಶಾಶ್ವತ ಕೆಲಸ ಆಗಿದೆ. ಅದು ಯಾರ ಕಣ್ಣಿಗೂ ಈಗ ಕಾಣಿಸುವುದಿಲ್ಲ, ಬಂದ ನಂತರ ತಿಳಿಯಲಿದೆ. ಮೇಗಳಾಪುರ ಮೂಲಕ ೩೦ ಎಂಎಲ್ಡಿ ಹಾಗೂ ಕಬಿನಿಯಿಂದ ೬೦ ಎಂಎಲ್ಡಿ ನೀರು ಲಿಫ್ಟ್ ಮಾಡಲಾಗುತ್ತದೆ. ಇನ್ನು ಆರು ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಕಾವೇರಿ ಹಾಗೂ ಕಬಿನಿ ನೀರು ಬರಲಿದೆ ಎಂದು ಹೇಳಿದರು.

ಖಾಸಗಿ ಬಡಾವಣೆಯಾದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೂ ಚುನಾವಣೆ ಸಂದರ್ಭದಲ್ಲಿ ಕೀಳು ಮಟ್ಟದ ಭಾಷೆ ಬಳಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಆದರೆ, ನನ್ನ ಜನ ನನ್ನನ್ನು ಕೈ ಬಿಡಲಿಲ್ಲ, ಸತತವಾಗಿ ಗೆಲ್ಲಿಸಿದ್ದಾರೆ. ಎಷ್ಟೇ ಅಪಪ್ರಚಾರ ಮಾಡಿದರೂ ಗೆಲ್ಲಿಸುವ ಜನ ಗಟ್ಟಿಯಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ನಾವೆಲ್ಲರೂ ಮಾತೃಭಾಷೆ ಕನ್ನಡವನ್ನು ಪ್ರೀತಿ ವಿಶ್ವಾಸ ಗೌರವದಿಂದ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಡೀ ಭರತ ಖಂಡದಲ್ಲೇ ಕನ್ನಡ ಭಾಷೆ ಸಮೃದ್ಧವಾದ ಭಾಷೆಯಾಗಿದೆ. ಇದಕ್ಕೆ ಚರಿತ್ರೆಯಲ್ಲಿ ದಾಖಲಾಗಿದೆ. ನಮ್ಮ ಕವಿಗಳು, ಸಾಹಿತಿಗಳು ನಮ್ಮ‌ ಭಾಷೆಗೆ ಗಟ್ಟಿಯಾದ ತಳಪಾಯ ಹಾಕಿದ್ದಾರೆ. ಅದನ್ನು ಮರೆತು ನಾವೆಲ್ಲರೂ ಬೇರೆ ಭಾಷೆಗಳಿಗೆ ಮಾರು ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಈ ಸುವರ್ಣ ಸಂದರ್ಭದಲ್ಲಿ ಕನ್ನಡ ಭಾಷೆಯ ಮೇಲೆ ನಮ್ಮ ವಿಶ್ವಾಸ ಹೆಚ್ಚಿದೆ. ಅದರ ನೆನಪಿಗಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಕನ್ನಡಿಗರು ಸಹೃದಯರು,  ಎಲ್ಲಾ ಭಾಷಿಕರು, ಜಾತಿ, ಧರ್ಮದವರನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಅವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡುವ ಮೂಲಕ ನಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಕನ್ನಡ ಶಾಲೆಯಲ್ಲಿ ಓದಿದವರು ಇಂದು ಉತ್ತಮ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ‌ಅವರುಗಳು ನಮ್ಮೆಲ್ಲರಿಗೆ ಮಾದರಿ ಆಗಿರಬೇಕು. ಮಕ್ಕಳಿಗೆ ಬೇರೆ ಭಾಷೆಯ ಜ್ಞಾನ ಇರಲಿ. ಆದರೆ, ಮೊದಲ ಆದ್ಯತೆ ಕನ್ನಡಕ್ಕೆ ಇರಲಿ. ತಾಯಿ ಭಾಷೆಯಾದ ಕನ್ನಡ ಮಕ್ಕಳ ಬೌದ್ಧಿಕ ಬೆಳವಣಿಗೆಯನ್ನು ಹೆಚ್ಚಿಸಲಿದೆ ಎಂದ ಅವರು, ನೆಲೆ, ಜಲ, ಭಾಷೆಗಾಗಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡಿಕೊಂಡು ಬರುತ್ತಿವೆ. ಇಂತಹ ಹೊತ್ತಿನಲ್ಲಿ ಅವರಿಗೆ ಬೆಂಬಲ ನೀಡಬೇಕು.

ನಾವು ಬದುಕುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ. ಎಲ್ಲದಕ್ಕೂ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ಅಲ್ಲಲ್ಲಿ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ಆ ಮೂಲಕ ಬಡಾವಣೆಯ ಅಭಿವೃದ್ಧಿ ಕೆಲಸ ಮಾಡಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಸರ್ಕಾರದ ಅನುದಾನ ಕಾಯುತ್ತಾ ಕೂರಬಾರದು. ಈ ಮೂಲಕ ಪರಿಸರ ಉಳಿಸಬೇಕಾದ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ವೇದಿಕೆ ಗೌರವಾಧ್ಯಕ್ಷ ಚೆಲುವೇಗೌಡ, ಅಧ್ಯಕ್ಷ ಸಿ.ಎಂ. ಥಾಮಸ್, ಪದಾಧಿಕಾರಿಗಳಾದ ಶಿವಸ್ವಾಮಿ,   ಮುರುಳೀಧರ ಮಾನೆ, ಮನುಕುಮಾರ್, ಮೋಹನ್ ರಾವ್, ಸಿದ್ದರಾಜೇಗೌಡ, ಮೋಹನ್ ಕುಮಾರ್, ಶೋಭಾ ಧನಂಜಯ, ವೀಣಾ ಕಾಮತ್, ರೇವಣ್ಣ, ಎಂ.ಕೆ.ಸಿದ್ದರಾಜು, ಅಶೋಕ್ ಬಿದ್ದಪ್ಪ, ನಾಗಭೂಷಣ್, ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.