ಮೈಸೂರು ಜಿಲ್ಲೆಯ ಸೋಮನಾಥಪುರ ಪ್ರಶಾಂತವಾದ ಗ್ರಾಮೀಣ ಪ್ರದೇಶ. ಇಲ್ಲೊಂದು ಭವ್ಯವಾದ ಹೊಯ್ಸಳರ ಕಲಾ ದೇಗುಲವಿದೆ. ಇದೇ ಕೇಶವ ದೇವಾಲಯ.
ಹೊಯ್ಸಳರ ರಾಜನಾದ ಮೂರನೇ ನರಸಿಂಹನ ಆಸ್ಥಾನದಲ್ಲಿ ಸೇನಾ ದಂಡನಾಯಕನಾಗಿದ್ದ ಸೋಮನಾಥನೆಂಬುವವ ಈ ದೇವಾಲಯವನ್ನು 1254-1291ರಲ್ಲಿ ನಿರ್ಮಾಣ ಮಾಡಿರುತ್ತಾನೆ. ಮಲ್ಲಿತಂಮ್ಮ, ಮಸಣತಂಮ್ಮ, ಭಾಮೇಯ-ಚಾಮೇಯ ಮುಂತಾದ ಶಿಲ್ಪಿಗಳು ಈ ಗುಡಿಯ ರೂವಾರಿಗಳು. ಈ ದೇವಾಲಯದ ಶಿಲ್ಪಗಳು ನಮ್ಮನ್ನು ಗತವೈಭವಕ್ಕೆ ಕರೆದೊಯ್ಯುತ್ತದೆ.
ಆಲಯ ತ್ರಿಕೂಟಾಚಲವಾಗಿದ್ದು ಪೂರ್ವ ದ್ವಾರದಿಂದ ಪ್ರವೇಶವಿದೆ. ನಕ್ಷತ್ರಾಕಾರದ ಜಗುಲಿಯ ಮೇಲೆ ನಿಂತಿದೆ. ಹೊಯ್ಸಳ ಶೈಲಿಯ ವಾಸ್ತು ಶಿಲ್ಪದ ಒಂದು ಭವ್ಯವಾದ ಉದಾಹರಣೆಯಾಗಿದೆ. 64 ದೇವ ಗೃಹಗಳಿಂದೊಡಗೂಡಿದ ವಿಶಾಲವಾದ ಆವರಣದ ಮಧ್ಯದಲ್ಲಿದೆ, ವೇಣುಗೋಪಾಲ, ಕೇಶವ, ಜನಾರ್ದನನ ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಮೂರು ಗೋಪುರ ಒಂದು ನವರಂಗದಿಂದ ಕೂಡಿದೆ.
ತಲವಿನ್ಯಾಸದಲ್ಲಿ ಗರ್ಭಗುಡಿ ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಒಳಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಕಂಬಗಳಿವೆ. ಜೋಲಾಡುವ ಹೂವಿನ ಮೊಗ್ಗು ಇದೆ. ಹೊರಗೋಡೆಯ ತಳಭಾಗದಲ್ಲಿ ಹಲವಾರು ಆಭರಣಗಳಿಂದ ಅಲಂಕೃತವಾದ ಆನೆಗಳ, ಬಳ್ಳಿಗಳ, ಪುರಾಣ ಇತಿಹಾಸಗಳ ಕಥೆಗಳ ಚಿಕ್ಕ ಚಿಕ್ಕ ವಿಗ್ರಹಗಳ ಗೋಪುರವಿದ್ದು ಪ್ರತಿ ವಿಗ್ರಹ ತನ್ನದೇ ಆದ ಪುಟ್ಟ ಗುಡಿಯಲ್ಲಿರುವಂತೆ ಭಾಸವಾಗುತ್ತದೆ.
ನಕ್ಷತ್ರಾಕಾರದ ರಚನೆ ಹೊಂದಿರುವುದರಿಂದ ನೆರಳು ಬೆಳಕಿನ ಪ್ರಭಾವದಿಂದ ವಿಗ್ರಹಗಳಿಗೆ ಸರಸ ಸೌಮ್ಯ, ರುದ್ರ, ಭೀಭತ್ಸ ಭಾವಗಳು ಕಂಡುಬರುವಂತೆ ನಿರ್ದಿಷ್ಟ ಸ್ಥಾನಗಳಲ್ಲಿ ಅವನ್ನಿರಿಸಿರುವುದು ಶಿಲ್ಪಿಯ ಕಲಾ ಚಾತುರ್ಯಕ್ಕೆ ನಿದರ್ಶನವಾಗಿದೆ. ಈ ಶಿಲ್ಪಗಳ ಕೌಶಲ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪುರಾಣ ಕಥೆಗಳ ವಿವಿಧ ಮಜಲುಗಳನ್ನು ಹಂತ ಹಂತವಾಗಿ ಅಷ್ಟೇ ನಾಜೂಕಿನಿಂದ ಕೆತ್ತಲಾಗಿದೆ. ಕಲಾಕೃತಿಗಳ ಮೂಲಕ ಪೌರಾಣಿಕ ಸನ್ನಿವೇಶಗಳನ್ನು ಸಾಮಾನ್ಯರಿಗೆ ಮನಮುಟ್ಟುವಂತೆ ಸ್ಫುಟವಾಗಿ ಕೆತ್ತಿದ್ದಾರೆ.
ತಿರುಗಣಿಗಳ ಮೇಲೆ ತಿರುಗಿಸಿ ಕೆತ್ತಿರುವ ಕಂಬಗಳು ಬಹಳ ನಾಜೂಕಾದ ಕೆತ್ತನೆಗಳಿಂದ ಕೂಡಿದ ಹದಿನಾರು ಭುವನೇಶ್ವರಿ ವಿಗ್ರಹಗಳು ಹೊಯ್ಸಳ ಕಲಾಕೃತಿಯ ಪ್ರತೀಕವಾಗಿವೆ. ಕೆತ್ತನೆ ಕಲಾತ್ಮಕವಾಗಿದೆ. ಆಲಯದ ಒಳಗೆ ವಿಸ್ಮಯದ ರಾಶಿಯೇ ಇದೆ. ವೇಸರ ಶೈಲಿಯ ಗೋಪುರಗಳಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ.
ಹೊರಭಾಗದ ಒಂದು ಗೋಡೆಯಲ್ಲಿ ಹೊಯ್ಸಳ ರಾಜ ಲಾಂಛನವಾದ ಸಳ ಹುಲಿಯನ್ನು ಎದುರಿಸುವ ಚಿತ್ರ ಪಟ್ಟಿಗೆಗಳಿವೆ. ಇದರ ಕೆಳಗೆ ನೃತ್ಯಗಾತಿಯರು, ಸಂಗೀತಗಾರರು ಎಲ್ಲ ಥರಹದ ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ.
ಕಾವೇರಿ ನದಿ ತೀರದಲ್ಲಿದ್ದು ಸುತ್ತಮುತ್ತ ಭತ್ತದ ಗದ್ದೆಗಳು ಪರಿಸರವನ್ನು ಮತ್ತಷ್ಟು ಸುಂದರಗೊಳಿಸಿವೆ. ಮಹಾದ್ವಾರದಲ್ಲಿ ನಿಂತಿರುವ ಫಲಕದಲ್ಲಿ ಮತ್ತು ದೇವಾಲಯದ ತೊಲೆಗಳಲ್ಲಿ ಕ್ರಿ.ಶ. 1269 ರಿಂದ 1550ರವರೆಗೆ ಕೆತ್ತಿರುವ ಶಿಲಾ ಲೇಖನಗಳು ದೇವಾಲಯದ ನಿರ್ಮಾಣದ ವಿವರ ಮತ್ತು ದೇವಾಲಯಕ್ಕೆ ಕೊಟ್ಟಿರುವ ದತ್ತಿಗಳನ್ನು ವಿವರಿಸುತ್ತದೆ.
ದುರಾದೃಷ್ಟವೆಂದರೆ ಶಿಲ್ಪಗಳೆಲ್ಲ ಭಗ್ನಗೊಂಡಿವೆ. ಆಳಿದ ಸಾಮ್ರಾಜ್ಯಗಳ ಇತಿಹಾಸ. ಶಿಲಾಶಾಸನಗಳ ಬಗ್ಗೆ, ಸಂಸ್ಕೃತ, ಪ್ರಾಕೃತಪಾಳಿ, ಹಳೆಗನ್ನಡ ಲಿಪಿ ಜ್ಞಾನ ಕೋಟೆಗಳ ಬಗ್ಗೆ ರಾಜ ಮಹಾರಾಜರ ಇತಿಹಾಸ, ಚಿತ್ರ ಕಲೆ, ರೇಖಾಚಿತ್ರ, ವರ್ಣ ಚಿತ್ರ ಶಿಲ್ಪ ವಾಸ್ತುಶಾಸ್ತ್ರ ಶಿಲಾಶಿಲ್ಪಗಳ ಬಗ್ಗೆ ಗತವೈಭವದ ವಿವರಣೆ ನೀಡುವ ಕಲೆ ಇತ್ಯಾದಿ ಸ್ಮಾರಕಗಳ ದರ್ಶಿಸುವುದು ಅತಿ ಮುಖ್ಯ. ಇಂದಿನ ಪೀಳಿಗೆಯವರು ಮುಂದಿನ ಜನಾಂಗಕ್ಕೆ ಇಂತಹ ಸ್ಮಾರಕಗಳನ್ನು ಕಾಪಾಡಿದರೆ ಅದರ ಸ್ಥಾನ ಅರಿತು ಸಂರಕ್ಷಿಸಿದರೆ ಶಿಲ್ಪ ಬ್ರಹ್ಮರ ಆತ್ಮಗಳು ತೃಪ್ತಿಪಟ್ಟಾವು.
ಸೋಮನಾಥಪುರವು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿದೆ. ಬೆಂಗಳೂರಿನಿಂದ ಮಳವಳ್ಳಿಮೂಲಕ ಬನ್ನೂರಿಗೆ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಮೂಲಕ ಹೋಗಬಹುದು. ಬನ್ನೂರಿನಿಂದ 8 ಕಿ.ಮೀ. ದೂರದಲ್ಲಿದೆ ಈ ಐತಿಹಾಸಿಕ ತಾಣ. ಸ್ವಂತ ವಾಹನ ಇದ್ದರೆ ಒಳ್ಳೆಯದು. ಊಟ, ವಾಸ್ತವ್ಯಕ್ಕೆ ತೊಂದರೆ ಇಲ್ಲ . ಮೈಸೂರಿನಿಂದ ಬನ್ನೂರು ಮೂಲಕ ಸೋಮನಾಥಪುರಕ್ಕೆ ಹೋಗಬಹುದು.