ಹುಬ್ಬಳ್ಳಿ: ರಾಜಕಾರಣ ನಿಂತ ನೀರಲ್ಲ. ಕೆಲವು ಉದ್ದೇಶಕ್ಕಾಗಿ ಕೆಲ ನಿರ್ಧಾರ ಅನಿವಾರ್ಯ ಎಂದು ಮಾಜಿ ಸಿಎಂ ಬೊಮ್ಮಾಯಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದಿಂದ ದುರಾಡಳಿತ ಹೆಚ್ಚಾಗಿದೆ. ಒಂದು ಕಡೆ ಅಭಿವೃದ್ಧಿ ಸಂಪೂರ್ಣ ಸ್ಥಗಿತ. ಮತ್ತೊಂದು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಒಂದು ಹಿಡಿ ಮಣ್ಣನ್ನು ರಸ್ತೆಗೆ ಹಾಕಲಾರದ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ರಾಜ್ಯ ಅಧೋಗತಿಗೆ ಹೋಗುತ್ತೆ. ಇದನ್ನು ನಿಲ್ಲಿಸುವ ಉದ್ದೇಶದಿಂದ ನಾವಂತೂ ಹೋರಾಟ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಜವಾಬ್ದಾರಿ ಇದೆ. ವಿರೋಧ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕೆಂಬುದು ರಾಜ್ಯದ ಜನರ ಅಪೇಕ್ಷೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರ ಬರ್ತಾ ಇವೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇನ್ನು ಇದೇ ವೇಳೆ ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಲ್ಲವೇ? ಆಗ ಇಬ್ಬರೂ ಅಸಹಾಯಕರಿದ್ದರಾ? ಎಂದು ತಿರುಗೇಟು ನೀಡಿದರು.
ಕೂಡಲೇ ಬರ ಪರಿಹಾರ ಘೋಷಿಸಿ
ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಕುಂಟು ನೆಪ ಹೇಳ್ತಿದೆ. ಬರ ಘೋಷಣೆ ಸಂಬಂಧ ಹಿಂದಿನಿಂದಲೂ ಇದೇ ನಿಯಮ ಇದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ? ನಾವು ಕೂಡ ಕೇಂದ್ರದ ಅನುದಾನಕ್ಕಿಂತ ಹೆಚ್ಚಿನ ಹಣ ನೀಡಿದ್ದೆವು. ನಾವೇನಾದರು ನಿಯಮ ಬದಲಾವಣೆಗಾಗಿ ಕಾದು ಕುಳಿತಿದ್ವಾ? ಬರ ಪರಿಹಾರದ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿ ಹಣ ಹಂಚಿದ್ದೇವೆ. ರಾಜ್ಯ ಸರ್ಕಾರಕ್ಕೆ ಜನರಿಗೆ ಸಹಾಯ ಮಾಡಬೇಕೆಂಬ ಮನಸಿಲ್ಲ. ಈ ಸರ್ಕಾರಕ್ಕೆ ರೈತರ ಸಂಕಷ್ಟ ನೆರವು ನೀಡುವ ಮನಸಿಲ್ಲ. ಸರ್ಕಾರ ಕೂಡಲೇ ಬರ ಪರಿಹಾರ ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಸಲಿ
ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಸಾರಿಗೆ ಸಮಸ್ಯೆ ಪರಿಹರಿಸುತ್ತೇವೆಂದು ಸಭೆ ಮಾಡಿದ್ರು. ಆದರೆ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದ ಸರ್ಕಾರದ ಬಗ್ಗೆ ಒಕ್ಕೂಟವು ವಿಶ್ವಾಸ ಕಳೆದುಕೊಂಡಿದೆ. ಈಗಲಾದರೂ ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆ ಈಡೇರಿಸಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.