ಮನೆ ದೇವಸ್ಥಾನ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಸೋಮೇಶ್ವರ ದೇವಾಲಯ

ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಸೋಮೇಶ್ವರ ದೇವಾಲಯ

0

ಬೆಂಗಳೂರು ಹಲವು ಪುರಾತನ ದೇವಾಲಯಗಳ ನೆಲೆವೀಡು. ಇಂದು ನಗರ ಬೃಹದಾಕಾರವಾಗಿ ಬೆಳೆದಿದೆ. ಒಂದೆಡೆ ಮೈಸೂರು ರಸ್ತೆಯಲ್ಲಿ ಕೆಂಗೇರಿಯನ್ನು ದಾಟಿ ಬಿಡದಿವರೆಗೂ ಬೆಳೆದಿದ್ದರೆ, ಇನ್ನೊಂದೆಡೆ ಯಲಹಂಕವನ್ನೂ ಮೀರಿ ದೇವನಹಳ್ಳಿಯವರೆಗೂ ಹಬ್ಬುತ್ತಿದೆ. ಮತ್ತೊಂದೆಡೆ ಕನಕಪುರ ರಸ್ತೆಯಲ್ಲಿ ಕಗ್ಗಲಿಪುರದವರೆಗೆ ವಿಸ್ತರಿಸುತ್ತಿದೆ. ಅದೇ ರೀತಿ ಬನ್ನೇರುಘಟ್ಟ ರಸ್ತೆಯಲ್ಲಿ ಹುಳಿಮಾವು, ಗೊಟ್ಟೆಗೆರೆಯನ್ನೂ ದಾಟಿ ಅಭಿವೃದ್ಧಿ ಹೊಂದುತ್ತಿದೆ.

Join Our Whatsapp Group

ಬೃಹತ್ ಬೆಂಗಳೂರು ನಗರವಾಗಿದೆ. ಬಿಬಿಎಂಪಿಯ ವ್ಯಾಪ್ತಿಗೇ ಬರುವ  ಗೊಟ್ಟಿಗೆರೆಯ ಬಳಿ ಪುರಾತನವಾದ ಸೋಮೇಶ್ವರ ದೇವಾಲಯವಿದೆ. ಹುಳಿಮಾವು ದಾಟಿ,  ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿ 2 ಕಿ.ಲೋ ಮೀಟರ್ ಸಾಗಿದರೆ, ಮುಖ್ಯರಸ್ತೆಗೆ ಅಂಟಿಕೊಂಡಂತೆ ಇರುವ ಈ ಪುರಾತನ ದೇವಾಲಯ ಗೋಚರಿಸುತ್ತದೆ.

ಸೋಮೇಶ್ವರ ದೇವಾಲಯ ಭದ್ರವಾದ ಪುರಾತನ ಕಲ್ಲು ಕಟ್ಟಡದ ದೇವಾಲಯವಾಗಿದ್ದು, ಸುಂದರ ಗೋಪುರವನ್ನೂ ಒಳಗೊಂಡಿದೆ. ಪ್ರವೇಶದ್ವಾರದ ಮೇಲಿರುವ ಈ ಗಾರೆಗಚ್ಚಿನ ಗೋಪುರ ಗೂಡಿನಲ್ಲಿ ವೃಷಭಾರೂಢ ಶಿವಪಾರ್ವತಿಯರ ಮೂರ್ತಿಗಳಿವೆ. ಪಕ್ಕದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನ ವಿಗ್ರಹಗಳಿವೆ. ಈ ಗೋಪುರಕ್ಕೆ ಚಿನ್ನದ ಬಣ್ಣ ಲೇಪಿಸಲಾಗಿದ್ದು, ಆಕರ್ಷಕವಾಗಿದೆ.

ದೇವಾಲಯದ ಪ್ರವೇಶದ ಕಬ್ಬಿಣದ ಸರಳಿನ ಗೇಟುಗಳನ್ನು ದಾಟಿ ಹೋದರೆ ವಿಶಾಲ ಪ್ರಾಕಾರವಿದೆ. ಮುಖ್ಯದ್ವಾರಕ್ಕೆ ನೇರವಾಗಿ ನಂದಿಯ ಮಂಟಪ ಮತ್ತು ಗರುಡಗಂಬವಿದ್ದು, ಪ್ರಧಾನ ಗರ್ಭಗೃಹದಲ್ಲಿ ಸೋಮೇಶ್ವರ ಲಿಂಗವಿದೆ. ಒಳ ಪ್ರಾಕಾರದಲ್ಲೂ ಗಾರೆಗಚ್ಚಿನ ಗೋಪುರಗಳಿದ್ದು, ಇದರಲ್ಲಿ ಗಣಪತಿಯ ಸುಂದರ ಗಾರೆ ಶಿಲ್ಪವಿದೆ.

ಗರ್ಭಗೃಹದ ಪಕ್ಕದಲ್ಲಿ ಆದಿ ವಂದಿಪ ಗಣಪನ ಪುಟ್ಟ ಗುಡಿಯಿದೆ. ಬಲಭಾಗದಲ್ಲಿ ತಾಯಿ ಪಾರ್ವತಿ ಅಮ್ಮನವರ ಗುಡಿ ಇದೆ. ಪ್ರಾಕಾರದಲ್ಲಿ ನವಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಲ್ಲಿ ಪ್ರತಿ ಸೋಮವಾರ ರುದ್ರಾಭಿಷೇಕ ನೆರವೇರುತ್ತದೆ.  ನಿತ್ಯ ಪೂಜೆ ನಡೆಯುತ್ತದೆ. ಪ್ರತಿನಿತ್ಯ ಬೆಳಗ್ಗೆ 7.30ರಿಂದ 11.30ರವರೆಗೆ ಹಾಗೂ ಸಂಜೆ 6ರಿಂದ 8ಗಂಟೆಯವರೆಗೆ ದೇವಾಲಯ ತೆರೆದಿರುತ್ತದೆ. ಕಾರ್ತೀಕಮಾಸದ ಸೋಮವಾರಗಳಂದು ಮತ್ತು ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯುತ್ತವೆ.

ದೇವಾಲಯದ ಪ್ರಾಕರದಲ್ಲಿ ಒಂದು ಕಡೆ ಶೇಷ ಸಹಿತನಾದ ಶಂಖ,ಚಕ್ರ, ಗದೆ ಮತ್ತು ಅಭಯಹಸ್ತನಾದ ಶ್ರೀಮನ್ನಾರಾಯಣನ ಗಾರೆಯಶಿಲ್ಪವಿದ್ದರೆ ಮತ್ತೊಂದು ಬದಿಯಲ್ಲಿ ಸಪ್ತಾಶ್ವಗಳ ರಥವೇರಿ ಕುಳಿತ ಸೂರ್ಯನಾರಾಯಣನ ಸುಂದರ ಗಾರೆಯ ಶಿಲ್ಪವಿದೆ. ಈ ದೇವಾಲಯ 100 ವರ್ಷಗಳಿಗೂ ಹೆಚ್ಚು ಪುರಾತನವಾದ್ದಾಗಿದೆ ಎಂದು ದೇವಾಲಯದ ಅರ್ಚಕರು ತಿಳಿಸುತ್ತಾರೆ.

ಹಿಂದಿನ ಲೇಖನನಾಪತ್ತೆಯಾಗಿದ್ದ ನೇಪಾಳದ ಹೆಲಿಕಾಪ್ಟರ್ ಪತನ: ಐವರ ಮೃತದೇಹ ಪತ್ತೆ
ಮುಂದಿನ ಲೇಖನಸಿಡಿಲು ಬಡಿದು ಸುಟ್ಟು ಕರಕಲಾದ ದಿನಸಿ ಅಂಗಡಿ: ಲಕ್ಷಾಂತರ ರೂ.ನಷ್ಟ