ಮನೆ ಮನರಂಜನೆ “ಸಪ್ತಸಾಗರದಾಚೆ ಎಲ್ಲೋ ಸೈಡ್‌- ಬಿ’ ಚಿತ್ರ ವಿಮರ್ಶೆ

“ಸಪ್ತಸಾಗರದಾಚೆ ಎಲ್ಲೋ ಸೈಡ್‌- ಬಿ’ ಚಿತ್ರ ವಿಮರ್ಶೆ

0

ಮನು ಮನಸ್ಸು ಅರ್ಧ ಸತ್ತೋಗಿದೆ, ಪ್ರೀತಿಸಿದ ಹುಡುಗಿ ಪಾಲಿಗೆ ಮನು ಈಗ ಒಂದು ನೆನಪು ಮಾತ್ರ… ಸುಂದರವಾದ ಪ್ರೀತಿ, ಕನಸನ್ನೇ ತುಂಬಿಕೊಂಡು, ಕೆಟ್ಟ ಯೋಚನೆ ಮಾಡದ ಮನು ಮನಸ್ಸಿನ ಒಂದು ಭಾಗವನ್ನು ಈಗ ಕ್ರೌರ್ಯ ಆವರಿಸಿಕೊಂಡಿದೆ. ವಿಶ್ವಾಸದ್ರೋಹ, ಜೈಲುವಾಸ, ಅಲ್ಲಿನ ವ್ಯವಸ್ಥೆ ಮನುವನ್ನು “ಬೇರೆ ರೀತಿ’ಯಲ್ಲಿ ಗಟ್ಟಿಗೊಳಿಸಿದೆ. ಆ ಗಟ್ಟಿತನ, ಒರಟು, ಕ್ರೌರ್ಯ ಎಲ್ಲವನ್ನು ಮನು ಈಗ ಉಪಯೋಗಿಸುತ್ತಿದ್ದಾನೆ. ಅದು ತನ್ನ ಪ್ರೀತಿಗಾಗಿ ಮತ್ತು ಅದೇ ಪ್ರೀತಿಗಾಗಿ…

 “ಸಪ್ತಸಾಗರದಾಚೆ ಎಲ್ಲೋ ಸೈಡ್‌-ಎ’ ನೋಡಿದವರಿಗೆ ಒಂದು ಕಾಡುವ ಪ್ರೀತಿ, ಮೋಸಕ್ಕೆ ಬಲಿಯಾಗುವ ಅಮಾಯಕನ ಕಥೆ ತೀವ್ರವಾಗಿ ಮನಸ್ಸು ಮುಟ್ಟಿತ್ತು. ಈಗ “ಸೈಡ್‌-ಬಿ’ ಬಿಡುಗಡೆಯಾಗಿದೆ. ಇಲ್ಲೂ ನಿರ್ದೇಶಕ ಹೇಮಂತ್‌ ಅದೇ ಲಯದೊಂದಿಗೆ ಕಥೆಯನ್ನು ಹೇಳುತ್ತಾ ಹೋಗಿದ್ದಾರೆ. ಮನು-ಪ್ರಿಯಾಳ ಲವ್‌ಸ್ಟೋರಿಯನ್ನು ಒಂದು ಕಾವ್ಯದಂತೆ, ಯಾವುದೇ ಅವಸರವಿಲ್ಲದೇ ಸಾವಧಾನವಾಗಿ ಹೇಳಿದ್ದರು. ಈಗ “ಸೈಡ್‌-ಬಿ’ನಲ್ಲೂ ಅದೇ ತನ್ಮಯತೆಯಿಂದ ಕಥೆ ಹೇಳಲಾಗಿದೆ. ಇಲ್ಲಿ ಮೊದಲ ಭಾಗದ ಪಾತ್ರಗಳು ಮುಂದುವರೆದಿವೆ. ಆ ಪಾತ್ರಗಳ ಮನಸ್ಥಿತಿ, ಪರಿಸ್ಥಿತಿಗಳಷ್ಟೇ ಬದಲಾಗಿವೆ. ಜೊತೆಗೆ ಹೊಸ ಪಾತ್ರಗಳು ಸೇರಿಕೊಂಡಿವೆ. ಮುಖ್ಯವಾಗಿ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದು ನಾಯಕ ರಕ್ಷಿತ್‌ ಶೆಟ್ಟಿ. ಒಂದು ದೊಡ್ಡ ಮಟ್ಟದ ಬದಲಾವಣೆಯೊಂದಿಗೆ ಅವರ ಪಾತ್ರ ಪ್ರವೇಶವಾಗುತ್ತದೆ. ಹಾಗಂತ ನಿರ್ದೇಶಕ ಹೇಮಂತ್‌ ಕಥೆಯ ಮೂಲ ಉದ್ದೇಶ ಬಿಟ್ಟುಕೊಟ್ಟಿಲ್ಲ. ಅದೇ ಪ್ರೀತಿ, ಆದರೆ ಕನಸು ಮಾತ್ರ ಬೇರೆ.

ಇಲ್ಲಿ ಹೆಚ್ಚು ಮಾತಿಲ್ಲ, ಆದರೆ ಚಿತ್ರದ ಸನ್ನಿವೇಶಗಳಿಗೆ ಕಾಡುವ ಗುಣವಿದೆ. ಅನೇಕ ಅಂಶಗಳನ್ನು ರೂಪಕದಂತೆ ಬಳಸಿದ್ದಾರೆ. ಮುಖ್ಯವಾಗಿ ಈ ಸಿನಿಮಾದ ಹೈಲೈಟ್‌ಗಳಲ್ಲಿ ಮನುವಿನ ವರ್ತನೆ ಹಾಗೂ ಪ್ರಿಯಾಳ ಪರಿಸ್ಥಿತಿ, ಪರಿಸರ ಕೂಡಾ ಒಂದು. ಇವೆಲ್ಲವನ್ನು ಯಾವುದೇ ಅವಸರವಿಲ್ಲದೇ, ಅತಿಯಾದ ಎಕ್ಸೆ„ಟ್‌ಮೆಂಟ್‌ನಿಂದ ಮುಕ್ತವಾಗಿಸಿ ಪ್ರೇಕ್ಷಕರ ಮುಂದಿಡಲಾಗಿದೆ. ಮನು ಬದಲಾದ ರೀತಿ, ಆತನೊಳಗಿನ ಕ್ರೌರ್ಯ, ಸಣ್ಣದಾಗಿ ಆವರಿಸಿಕೊಂಡ ಸ್ವಾರ್ಥ, ಪ್ರೀತಿ ಬಗೆಗಿನ ಆತನ ಉದ್ದೇಶ ಮತ್ತು ಯೋಚನಾ ಲಹರಿಯೇ “ಸೈಡ್‌-ಬಿ’ ಜೀವಾಳ. ಇದೇ ಕಾರಣದಿಂದ ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮನು ಹಾಗೂ ಇತರ ಪಾತ್ರಗಳು ಪ್ರೇಕ್ಷಕರ ಜೊತೆ ಹೆಜ್ಜೆ ಹಾಕುತ್ತವೆ. ಚಿತ್ರದಲ್ಲಿ ಮಾಸ್‌ ಪ್ರೇಮಿಗಳಿಗೆ ಇಷ್ಟವಾಗುವಂತಹ ಫೈಟ್‌ ಕೂಡಾ ಇದೆ.

ಮೊದಲೇ ಹೇಳಿದಂತೆ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವುದು ನಾಯಕ ರಕ್ಷಿತ್‌ ಶೆಟ್ಟಿ. ಇಲ್ಲಿ ಅವರ ಗೆಟಪ್‌ ಬದಲಾಗಿದೆ. ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳಲ್ಲಿ ರಕ್ಷಿತ್‌ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ಹೆಚ್ಚು ಮಾತಿಲ್ಲದೇ ಕಾಡುವ ಪಾತ್ರದಲ್ಲಿ ರಕ್ಷಿತ್‌ ಮಿಂಚಿದ್ದಾರೆ. ನಾಯಕಿಯರಾದ ರುಕ್ಮಿಣಿ ವಸಂತ್‌ ಹಾಗೂ ಚೈತ್ರಾ ಆಚಾರ್‌ ಇಬ್ಬರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ರಮೇಶ್‌ ಇಂದಿರಾ, ಗೋಪಾಲ ದೇಶಪಾಂಡೆ ಪಾತ್ರಗಳು ಗಮನ ಸೆಳೆಯುತ್ತವೆ. ಚಿತ್ರದ ಸಂಗೀತ ಹಾಗೂ ಛಾಯಾಗ್ರಹಣ “ಸೈಡ್‌-ಬಿ’ಗೆ ಹೊಸ ಮೆರುಗು ನೀಡಿದೆ.