ಮನೆ ಕಾನೂನು ಮಗ ಮತ್ತು ಸೊಸೆ ತಮ್ಮ ಮೌಲ್ಯ, ವಿಚಾರಗಳನ್ನು ವೃದ್ಧ ಪೋಷಕರ ಮೇಲೆ ಹೇರುವಂತಿಲ್ಲ: ಕಲ್ಕತ್ತಾ ಹೈಕೋರ್ಟ್

ಮಗ ಮತ್ತು ಸೊಸೆ ತಮ್ಮ ಮೌಲ್ಯ, ವಿಚಾರಗಳನ್ನು ವೃದ್ಧ ಪೋಷಕರ ಮೇಲೆ ಹೇರುವಂತಿಲ್ಲ: ಕಲ್ಕತ್ತಾ ಹೈಕೋರ್ಟ್

0

ತಮ್ಮ ತಂದೆ ತಾಯಿಯ ಮನೆಯಲ್ಲಿ ಇರುವ ಮಗ ಮತ್ತು ಸೊಸೆ ತಮ್ಮ ಮೌಲ್ಯಗಳನ್ನು ವೃದ್ಧ ಪೋಷಕರ ಮೇಲೆ ಹೇರುವಂತಿಲ್ಲ. ಪೋಷಕರ ಆಲೋಚನೆಗಳೊಂದಿಗೆ ಸಹಮತ ಹೊಂದಿಲ್ಲದೆ ಹೋದರೆ ಅವರು ಮನೆಯಿಂದ ಹೊರಹೋಗಲು ಸ್ವತಂತ್ರರು ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

 [ಅಸಿತ್ ಕುಮಾರ್ ಪಾಲಿತ್ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಹಿರಿಯ ನಾಗರಿಕ ಮತ್ತು ನಿವೃತ್ತ ಗಣಿತ ಶಿಕ್ಷಕರಾಗಿರುವ ಅರ್ಜಿದಾರರು ತಮ್ಮ ‘ಹಳೆಯ ಕಾಲದ ಮೌಲ್ಯಗಳೊಂದಿಗೆ ಸ್ವಲ್ಪ ಹಠಮಾರಿ ವ್ಯಕ್ತಿತ್ವದವರು ಎಂಬುದನ್ನು  ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರಿದ್ದ ಏಕಸದಸ್ಯ ಪೀಠ ಗಮನಿಸಿತು.

“ಅರ್ಜಿದಾರರು ಮತ್ತು ಅವರ ಮಗನ ನಡುವೆ ಆಲೋಚನಾ ಸಂಘರ್ಷವಿದೆ. ಅರ್ಜಿದಾರರು ಮತ್ತು ಅವರ ಪತ್ನಿಯೊಂದಿಗೆ ಮಗ ಮತ್ತು ಸೊಸೆ ಸಹಮತಕ್ಕೆ ಬಾರದೇ ಹೋದರೆ ಅವರು ತಮ್ಮಷ್ಟಕ್ಕೇ ಮನೆ ತೊರೆಯಲು ಸ್ವತಂತ್ರರು. ಅವರು ತಮ್ಮ ಚಿಂತನೆ ಮತ್ತು ಮೌಲ್ಯಗಳನ್ನು ಪೋಷಕರ ಮೇಲೆ ಹೇರುವಂತಿಲ್ಲ,” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಗ ಮತ್ತು ಸೊಸೆ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದು  ಮನೆಯಲ್ಲಿ ಅವರು ಇರುವುದು ತಮಗೆ ಆರಾಮದಾಯಕವಲ್ಲ ಎಂದಿದ್ದ ಅರ್ಜಿದಾರರು ತಮ್ಮ ಮಗ ಮತ್ತು ಸೊಸೆಯ ವಿರುದ್ಧ ಐಪಿಸಿ ಮತ್ತು ʼಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ- 2007ರʼ ಅಡಿಯಲ್ಲಿ ಎಫ್’ಐಆರ್ ದಾಖಲಿಸಿದ್ದರು. ಆದರೆ ಅರ್ಜಿದಾರರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಮೂರನೇ ವ್ಯಕ್ತಿಯ ಒತ್ತಾಯದಿಂದ ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಮಗ ಮತ್ತು ಸೊಸೆ ದೂರಿದ್ದರು.

ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ಸೂಚಿಸಿದ್ದಂತೆ ಮಂಗಳವಾರ ವರದಿ ಸಲ್ಲಿಸಿದ ಪೊಲೀಸರು “ಅರ್ಜಿದಾರರು ಮಾನಸಿಕವಾಗಿ ಸ್ವಸ್ಥರಾಗಿದ್ದಾರೆ ಎಂದು ತಿಳಿಸಿದರು. ಅರ್ಜಿದಾರರ ಪತ್ನಿ ಕೂಡ ತಾವು ಪತಿಯೊಂದಿಗೆ ಸೌಖ್ಯವಾಗಿರುವುದಾಗಿ ನ್ಯಾಯಾಲಯಕ್ಕೆ ವಿವರಿಸಿದರು.

ಪತಿ ಮತ್ತು ಮಗನ ಮೇಲಿನ ಪ್ರೀತಿಯ ನಡುವೆ ಅರ್ಜಿದಾರರ ಪತ್ನಿ ಸಂಘರ್ಷ ಎದುರಿಸುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಇದರ ಲಾಭವನ್ನು ಸೊಸೆ ಮತ್ತು ಮಗ ಮಾಡಿಕೊಳ್ಳಲು ಹೊರಟಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದಿತು.

ತಮ್ಮ ಹೆತ್ತವರೊಂದಿಗೆ ಅನುಚಿತವಾಗಿ ವರ್ತಿಸಬಾರದು. ಒಂದು ವೇಳೆ ಪೋಷಕರಿಂದ ದೂರು ಬಂದರೆ ಪೊಲೀಸರು ಮಗ ಮತ್ತು ಸೊಸೆ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕು ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಪ್ರತಿದಿನವೂ ಸ್ಥಳೀಯ ಪೊಲೀಸರು ಒಂದು ತಿಂಗಳ ಕಾಲ ಪೋಷಕರ ಮನೆ ಮೇಲೆ ನಿಗಾ ಇಡಬೇಕು. ಮಗ ಮತ್ತು ಸೊಸೆ ವಿರುದ್ಧ ಎಫ್ಐಆರ್ ದಾಖಲಾದರೆ ಕೂಡಲೇ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

ಹಿಂದಿನ ಲೇಖನ24 ಗಂಟೆಯೊಳಗೆ ಅಪಘಾತ ಪ್ರಕರಣದ ವಾಹನ ಹಿಂತಿರುಗಿಸಲಾಗುವುದು: ಡಾ.ಎಂ.ಎ.ಸಲೀಂ
ಮುಂದಿನ ಲೇಖನಚಳಿಗಾಲದಲ್ಲಿ ಎಳ್ಳು ಮತ್ತು ಎಳ್ಳೆಣ್ಣೆ: ಆರೋಗ್ಯಕ್ಕೆ ತುಂಬಾ ಸಹಾಯಕ