ಮನೆ ಮನರಂಜನೆ ಗ್ಯಾಂಗ್’ಸ್ಟರ್ ಆಗಿ ತೆರೆ ಮೇಲೆ ಬರಲು ಸಜ್ಜಾದ ರವಿಚಂದ್ರನ್ ಪುತ್ರ

ಗ್ಯಾಂಗ್’ಸ್ಟರ್ ಆಗಿ ತೆರೆ ಮೇಲೆ ಬರಲು ಸಜ್ಜಾದ ರವಿಚಂದ್ರನ್ ಪುತ್ರ

0

‘ತ್ರಿವಿಕ್ರಮ’ ಚಿತ್ರದ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಕ್ರೇಜಿ ಸ್ಟಾರ್‌ ವಿ.ರವಿಚಂದ್ರನ್ ಅವರ ಪುತ್ರ ವಿಕ್ರಮ್‌ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದು, ಗ್ಯಾಂಗ್’ಸ್ಟರ್ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ಸಹನಾಮೂರ್ತಿ ಆ್ಯಕ್ಷನ್‌ ಕಟ್‌ ಹೇಳಿದ್ದ ‘ತ್ರಿವಿಕ್ರಮ’ ಗಾಂಧಿನಗರದಲ್ಲಿ ಸದ್ದು ಮಾಡಿತ್ತು. ವಿಕ್ರಮ್‌ ತಮ್ಮ ನಟನೆ, ಆ್ಯಕ್ಷನ್‌ ಸೀಕ್ವೆನ್ಸ್‌ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು.

ಇದಾದ ಬಳಿಕ ವಿಕ್ರಮ್‌ ಯಾರ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮೊದಲ ಸಿನಿಮಾದಲ್ಲಿ ಮಧ್ಯಮ ವರ್ಗದ ಮನೆಯ ಹುಡುಗನಾಗಿ ತೆರೆ ಮೇಲೆ ಬಂದಿದ್ದ ವಿಕ್ರಮ್‌ ಇದೀಗ ಗ್ಯಾಂಗ್‌’ಸ್ಟರ್‌ ಅವತಾರ ತಾಳಲಿದ್ದಾರೆ ಎಂದಿದೆ ಹೊಸ ಚಿತ್ರತಂಡ.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್, ತಮ್ಮ ಚೊಚ್ಚಲ ಚಿತ್ರದಲ್ಲಿ ವಿಕ್ರಮ್‌’ಗೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ.

ಎರಡನೇ ಸಿನಿಮಾದಲ್ಲಿ ಮಾಸ್ ಹೀರೊ ಆಗಿ ತೆರೆ ಮೇಲೆ ಮಿಂಚಲು ವಿಕ್ರಮ್‌ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ ಎಂದಿದೆ ಚಿತ್ರತಂಡ. ಇತ್ತೀಚೆಗಷ್ಟೇ ತೆರೆಕಂಡಿದ್ದ ‘ಹೆಡ್ ಬುಷ್’ ಸಿನಿಮಾದಲ್ಲೂ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಾರ್ತಿಕ್‌, ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.

ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಸರಳವಾಗಿ ನಡೆದಿದೆ.ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಶೀರ್ಷಿಕೆ, ತಾರಾಬಳಗ, ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ಕಾರ್ತಿಕ್ ರಾಜನ್ ತಿಳಿಸಿದ್ದಾರೆ.

ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಎಸ್.ಥಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.