ಮೈಸೂರು : ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಕೇಂದ್ರ ಸರ್ಕಾರ ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ʻಯೂನಿಟಿ ಮಾಲ್ʼ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದಕ್ಕೆ ಗುದ್ದಲಿ ಪೂಜೆ ಮಾಡಿದ್ದರು. ಆದರೆ ಈ ಕಾರ್ಯಕ್ಕೆ ಯದುವೀರ್ ಅವರ ತಾಯಿ ಯದುವಂಶದ ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ ತಂದಿದ್ದಾರೆ. ಈ ಮೂಲಕ ಮಗ ಮಾಡಿದ ಗುದ್ದಲಿ ಪೂಜೆಗೆ ಅಮ್ಮನೆ ತಡೆಯಾಜ್ಞೆ ತಂದಂತಾಗಿದೆ.
ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರ 6.5 ಎಕರೆ ಪ್ರದೇಶದಲ್ಲಿ ‘ಯೂನಿಟಿ ಮಾಲ್‘ ನಿರ್ಮಾಣಕ್ಕೆ ಜು. 27ರಂದು ಸಂಸದ ಯದುವೀರ್ ಗುದ್ದಲಿ ಪೂಜೆ ನೇರವೇರಿಸಿದ್ದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಈಗ ಈ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಸದಂತೆ ಹಾಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಪಿಪಿಪಿ ಮಾದರಿಯಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ʻಯೂನಿಟಿ ಮಾಲ್ʼ ನಿರ್ಮಾಣ ಕಾರ್ಯ ಆರಂಭವಾಗಿತ್ತು. ದೇಶದ ವಿವಿಧ ರಾಜ್ಯಗಳ ಒಟ್ಟು 36 ವಾಣಿಜ್ಯ ಮಳಿಗೆಗಳನ್ನು ಪ್ರಾರಂಭಿಸಿಲು ಉದ್ದೇಶಿಸಲಾಗಿತ್ತು. ಜೊತೆಗೆ ಅತಿಥೇಯ ರಾಜ್ಯ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದು ಮಳಿಗೆ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿತ್ತು. ಆ ಮೂಲಕ ಆಯಾ ರಾಜ್ಯಗಳ ದೇಸಿಯ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಹಾಗೂ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶ ಆಗಿತ್ತು ಎನ್ನಲಾಗಿದೆ.















