ಬೆಂಗಳೂರು : ಇಂದಿರಾಗಾಂಧಿ ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು. ಇಂದಿರಾಗಾಂಧಿ ಅವರು ಈ ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ ನೀಡಿ ಹುತಾತ್ಮರಾದವರು. ಅವರು ಪ್ರಧಾನಿಗಳಾಗಿದ್ದಾಗ ಈ ದೇಶಕ್ಕೆ ನೀಡಿದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಜೆಪಿ ನಗರದ ಸಾರಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು. ಇದೇ ವೇಳೆ ಸೋನಿಯಾ ಗಾಂಧಿ ಅವರ ತ್ಯಾಗವನ್ನು ನೆನೆದರು.
ದೇಶಕ್ಕೆ ಗಾಂಧಿ ಕುಟುಂಬದ ದೊಡ್ಡ ಕೊಡುಗೆ ಇದೆ. ಸೋನಿಯಾಗಾಂಧಿ ಅವರಿಗೆ ಪ್ರಧಾನಿ ಆಗುವ ಅವಕಾಶವಿತ್ತು. ದೇಶದಲ್ಲಿ ಅನೇಕರು ಟೀಕೆ ಮಾಡಿದ್ರು. ಮಧ್ಯಪ್ರದೇಶದ ಮಾಜಿ ಸಿಎಂ ತಲೆಬೊಳಿಸಿಕೊಳ್ತಿನಿ ಅಂದರು.
ಯುಪಿಎ ಒಕ್ಕೂಟ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಸ್ಥಾನ ಕೊಟ್ಟರು. ಆದ್ರೆ ಸೋನಿಯಾ ಗಾಂಧಿ ಒಪ್ಪದೇ ಅಧಿಕಾರ ಮುಖ್ಯವಲ್ಲ ಅಂದ್ರು. ಆರ್ಥಿಕ ತಜ್ಞ ಮನಮೋಹನ್ ಸಿಂಗ್ಗೆ ಪ್ರಧಾನಿ ಸ್ಥಾನವನ್ನ ಬಿಟ್ಟುಕೊಟ್ಟರು ಎಂದು ಸ್ಮರಿಸಿದರು.
ಮುಂದುವರಿದು.. ಬಡತನ ನಿವಾರಣೆಗೆ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಂದಿರಾಗಾಂಧಿಯವರ ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ರಾಜ್ಯದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದು ಬಡವರಿಗೆ ಭೂಮಿ ಹಂಚಿದರು.
ಇದರಿಂದ ಲಕ್ಷಾಂತರ ಜನ ಭೂಮಿ ಪಡೆಯುವಂತಾಯಿತು. ಪ್ರತಿಯೊಂದು ತಾಲ್ಲೂಕಿನಲ್ಲಿ 10-15 ಸಾವಿರ ರೈತರು ಇದರ ಫಲಾನುಭವಿಗಳಾದರು. ಇಡೀ ದೇಶದಲ್ಲಿಯೇ ಇಂತಹ ಭೂಕ್ರಾಂತಿ ಎಲ್ಲಿಯೂ ಆಗಿಲ್ಲ ಎಂದರು.
ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರ ಬದುಕಿಗೆ ನೆರವಾದರು. ಸಣ್ಣ ಆರ್ಥಿಕ ಬೆಂಬಲಕ್ಕೂ ಕಷ್ಟ ಪಡುತ್ತಿದ್ದ ಜನರಿಗೆ ಸಾಲ ದೊರೆಯುವಂತಾಯಿತು. ಆರ್ಥಿಕ ಸಂಕಷ್ಟ ಶಮನಕ್ಕೆ ಈ ನಿರ್ಧಾರ ನಾಂದಿಯಾಯಿತು.
ಇದರಿಂದ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರು ಸಾಲ ಮೇಳ ಏರ್ಪಡಿಸಿ ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ 5 ರಿಂದ 10 ಸಾವಿರದ ತನಕ ಸಾಲ ನೀಡಿ ದೊಡ್ಡ ಕ್ರಾಂತಿಕಾರಕ ನಡೆಗೆ ಕಾರಣರಾದರು. ವಿಧಾನಸಭೆ ಚುನಾವಣೆ ಸೋತಿದ್ದ ನಾನು ನನ್ನ ಕ್ಷೇತ್ರದಲ್ಲಿ ಸಾಲಮೇಳ ಏರ್ಪಡಿಸಿ ಜಿಲ್ಲಾ ಪಂಚಾಯತಿ ಚುನಾವಣೆ ಗೆದ್ದು ಬಂದೆನು ಎಂದರು.















