ಮನೆ ರಾಜ್ಯ ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳಿಗೆ ಎಸ್‌ಒಪಿ : ಗೃಹ ಸಚಿವ ಪರಮೇಶ್ವರ್

ಬೃಹತ್ ಸಭೆ-ಸಮಾರಂಭಗಳು, ಕಾರ್ಯಕ್ರಮಗಳಿಗೆ ಎಸ್‌ಒಪಿ : ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು: ಐಪಿಎಲ್ 2025 ಟ್ರೋಫಿ ಜಯಿಸಿದ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಮೃತಪಟ್ಟ ಹಿನ್ನೆಲೆ, ಸರ್ಕಾರ ತಕ್ಷಣ ಎಚ್ಚರಿಕೆಯ ಕ್ರಮ ಕೈಗೊಂಡಿದೆ. ಈ ಭೀಕರ ಘಟನೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುಂದಿನ ದಿನಗಳಲ್ಲಿ ಯಾವುದೇ ಬೃಹತ್ ಸಭೆ-ಸಮಾರಂಭಗಳಿಗೆ ನಿರ್ವಹಣಾ ನಿಯಮಗಳಿರುವ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ರೂಪಿಸಲಾಗುವುದು ಎಂದು ಘೋಷಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್, “ಇಂತಹ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಬೃಹತ್ ಕಾರ್ಯಕ್ರಮಗಳು, ವಿಜಯೋತ್ಸವಗಳು, ಸಭೆ, ಸಂಭ್ರಮಾಚರಣೆಗಳಿಗೆ ಎಸ್‌ಒಪಿ ಕಡ್ಡಾಯವಾಗಲಿದೆ. ಪೊಲೀಸ್ ಇಲಾಖೆಯ ನಿರ್ದೇಶನದ ಚೌಕಟ್ಟಿನಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು. ಯಾವುದೇ ರೀತಿಯ ಅಸಮಂಜಸತೆ ಅಥವಾ ಲೋಪಗಳು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲಿದ್ದೇವೆ. ಲೋಪಗಳನ್ನು ಗುರುತಿಸಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಘಟನೆಯಲ್ಲಿ 11 ಜನ ಮೃತಪಟ್ಟಿದ್ದಾರೆ. 56 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 46 ಜನರು ಚಿಕಿತ್ಸೆಯ ನಂತರ ಮನೆಗೆ ಮರಳಿದ್ದಾರೆ, 10 ಜನರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದರು.

“ಅಮಾಯಕರ ಸಾವಿನಿಂದ ಎಲ್ಲರೂ ಬೇಸರಗೊಂಡಿದ್ದೇವೆ. ಮೃತರಾದವರಲ್ಲಿ ಹಲವರು ಕೇವಲ 20–25 ವರ್ಷದ ಯುವಕರು. ಅವರು ಸಂತೋಷದಿಂದ ಆರ್‌ಸಿಬಿ ಗೆಲುವು ಆಚರಿಸಲು ಬಂದಿದ್ದರು. ಅಂಥವರು ಪ್ರಾಣ ಕಳೆದುಕೊಳ್ಳುತ್ತಾರೆಂದು ನಿರೀಕ್ಷಿಸಿರಲಿಲ್ಲ. ಇಂತಹ ಘಟನೆಗಳು ಮರುಕಳಿಸಬಾರದು” ಎಂಬ ಭಾವನಾತ್ಮಕ ಪ್ರತಿಕ್ರಿಯೆ ನೀಡಿದರು. ಲೋಪಗಳನ್ನು ಗುರುತಿಸಿ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ್ ಭರವಸೆ ನೀಡಿದರು.