ಸಿಯೋಲ್: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರಿಗೆ ದುಷ್ಕರ್ಮಿಯೊಬ್ಬ ಸಾರ್ವಜನಿಕ ಪ್ರದೇಶದಲ್ಲೇ ಚಾಕುವಿನಿಂದ ಇರಿದಿದ್ದಾನೆ.
ಈ ಕುರಿತು ಸುದ್ದಿ ಸಂಸ್ಥೆ ಯೋನ್ ಹಾಪ್ ವರದಿ ಮಾಡಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರು ಬುಸಾನ್‌ನ ಗಡೆಯೊಕ್ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಿಮಾನ ನಿಲ್ದಾಣವನ್ನು ವೀಕ್ಷಿಸಲು ತೆರಳಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಯೋರ್ವ 59 ವರ್ಷದ ಲೀ ಜೈ ಮ್ಯೂಂಗ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಇದರಿಂದಾಗಿ ಮ್ಯೂಂಗ್ ಅವರ ಕುತ್ತಿಗೆಯ ಎಡಭಾಗಕ್ಕೆ ಗಾಯವಾಗಿದ್ದು, ಕೂಡಲೇ ಅವರನ್ನು ಹೆಲಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದಲೇ ದಾಳಿಕೋರನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಇದು ಲೀ ವಿರುದ್ಧದ ಭಯೋತ್ಪಾದಕ ಕೃತ್ಯವಾಗಿದೆ ಮತ್ತು ಯಾವುದೇ ಸಂದರ್ಭಗಳಲ್ಲಿ ಎಂದಿಗೂ ಸಂಭವಿಸಬಾರದು. ಪ್ರಜಾ ಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ” ಎಂದು ಲೀ ಅವರ ಡೆಮಾಕ್ರಟಿಕ್ ಪಕ್ಷದ ಸಂಸದ ಕ್ವಾನ್ ಚಿಲ್-ಸಿಯುಂಗ್ ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.