ಲಕ್ನೋ : ಕೆಮ್ಮಿನ ಸಿರಪ್ ಅಕ್ರಮ ವ್ಯಾಪಾರ ಪ್ರಕರಣದ ಆರೋಪಿಗಳು ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾವು ಯಾರನ್ನೂ ಬಿಡುವುದಿಲ್ಲ, ಸಮಯ ಬಂದಾಗ ಬುಲ್ಡೋಜರ್ ಕಾರ್ಯಾಚರಣೆ ಕೂಡ ನಡೆಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೆಮ್ಮಿನ ಸಿರಪ್ ಪ್ರಕರಣ ಸಂಬಂಧ ಈಗಾಗಲೇ 78 ಜನರನ್ನು ಬಂಧಿಸಲಾಗಿದ್ದು, 134 ಕಡೆ ದಾಳಿ ನಡೆಸಲಾಗಿದೆ. ಡಿಜಿಪಿ ದರ್ಜೆಯ ಅಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಸಮಾಜವಾದಿ ಪಕ್ಷಕ್ಕೆ ಸಂಬಂಧಿಸಿದವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ವಿರುದ್ಧವೂ ಬುಲ್ಡೋಜರ್ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಕೆಮ್ಮಿನ ಸಿರಪ್ ಉತ್ಪಾದನೆ ನಡೆಯುವುದಿಲ್ಲ, ಇದು ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಉತ್ಪಾದನೆಯಾಗಿ, ಅಕ್ರಮವಾಗಿ ತರಲಾಗುತ್ತಿದೆ. ಅಲ್ಲದೇ ಈ ಸಿರಪ್ ಅನ್ನು ನಕಲಿ ಬಿಲ್‌ಗಳ ಮೂಲಕ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.















