ಬೀದರ್ : ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಅಂಡರ್ ವರ್ಲ್ಡ್‌ನಿಂದ ಜೀವ ಬೆದರಿಕೆ ಕರೆಗಳು ಬಂದಿರುವುದು ಬಹಿರಂಗವಾಗಿದೆ. ಈ ಸುದ್ದಿ ರಾಜ್ಯದ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಯು.ಟಿ. ಖಾದರ್, ಅಂಡರ್ ವರ್ಲ್ಡ್ ಮತ್ತು ಇನ್ನಿತರ ಮೂಲಗಳಿಂದ ಜೀವ ಬೆದರಿಕೆ ಕರೆಗಳು ಬಂದಿರುವುದಾಗಿ ಹೇಳಿದ್ದಾರೆ. “ಈ ಹಿಂದೆ ಕೂಡ ಹಲವು ಬಾರಿ ನನ್ನ ಬಳಿ ಇಂಥ ಬೆದರಿಕೆ ಕರೆಗಳು ಬಂದಿವೆ. ಆದರೆ ಈ ಬಾರಿ ಆಗುತ್ತಿರುವದ್ದು ವಿಭಿನ್ನವಾಗಿದೆ” ಎಂದು ಅವರು ಹೇಳಿದರು.
ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ ಮತ್ತೊಂದು ಪ್ರಮುಖ ವಿಷಯವೆಂದರೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶಾಖೆ ಸ್ಥಾಪನೆಯ ಬಗ್ಗೆ. “ನನ್ನ ರಕ್ಷಣೆಗೆಂದು ಮಂಗಳೂರಿನಲ್ಲಿ ಎನ್‌ಐಎ ಸ್ಥಾಪಿಸುವ ಅಗತ್ಯವಿಲ್ಲ. ಜಿಲ್ಲೆಯ ಜನರಿಗಾಗಿ ಬೇಕಾದರೆ ಸ್ಥಾಪನೆ ಮಾಡಲಿ. ನಾನು ಒಬ್ಬ ಸಾಮಾನ್ಯ ವ್ಯಕ್ತಿ. ನನ್ನ ಬದುಕು ದೇವರ ಕೈಯಲ್ಲಿದೆ,” ಎಂದು ಹೇಳಿದರು. “ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂಬುದನ್ನು ದೇವರು ನಿರ್ಧಾರಿಸುತ್ತಾನೆ. ನಾನು ನೆಮ್ಮದಿಯಿಂದ ಸಾಯುವ ಪರಿಸ್ಥಿತಿ ಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಾನು ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ, ಮುಂದಿನ ಕ್ಷಣದಲ್ಲೂ ಇರಬೇಕೆಂದು ಯಾರಿಗೂ ಖಚಿತವಿಲ್ಲ,” ಎಂದು ಅವರು ಭಾವೋದ್ರೇಕದಿಂದ ಹೇಳಿದರು. ಅವರ ಮಾತುಗಳಲ್ಲಿ ಆತಂಕದ ಜೊತೆಗೆ ಆತ್ಮಸ್ಥೈರ್ಯವೂ ವ್ಯಕ್ತವಾಯಿತು.














