ಮೈಸೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಂಭವನೀಯ ರಾಸಾಯನಿಕ ವಿಪತ್ತುಗಳ ತಡೆಗೆ ವಿಶೇಷ ಕಾಳಜಿ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಬಾರದು. ಅಪಾಯಕಾರಿಯಾದ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಯಾವುದೇ ತರದ ಅವಘಡಗಳು ಜರುಗದಂತೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಸಂಭವನೀಯ ಅವಘಡಗಳನ್ನು ತಡೆಯುವಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತಂತೆ ಸೂಕ್ತ ತರಬೇತಿ, ಉಪಕರಣಗಳು ಸೇರಿದಂತೆ ವಿಪತ್ತು ಯೋಜನೆ ರೂಪಿಸಿಕೊಂಡು ಸದಾ ಸನ್ನದ್ಧರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅತೀ ಹೆಚ್ಚು ಪರಿಣಾಮ ಬೀರುವ ರಾಸಾಯನಿಕ ಬಳಕೆಯ ಕಾರ್ಖಾನೆಗಳನ್ನು ಗುರುತಿಸಿಕೊಳ್ಳಬೇಕು. ಕಾಲಕಾಲಕ್ಕೆ ಅವುಗಳ ತಪಾಸಣೆ ನಡೆಸಬೇಕು. ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಡಾ. ಪೂರ್ಣಿಮಾ , ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಾದ ಚೇತನ್, ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.