ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು(ಅಕ್ಟೋಬರ್ 05) ಎಸ್ಐಟಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ , ಮುನಿರತ್ನಗೆ 14 ದಿನ(ಅಕ್ಟೋಬರ್ 19ರ ವರೆಗೆ) ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಬಿಜೆಪಿ ಶಾಸಕ ಮುನಿರತ್ನ ಎಸ್ಐಟಿ ಕಸ್ಟಡಿ ಇಂದು ಅಂತ್ಯವಾಗಿದೆ. ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಮುನಿರತ್ನ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರು ಪಡಿಸಿದ್ದು, ಮತ್ತೆ ಮುನಿರತ್ನರನ್ನು ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದರು. ಆದ್ರೆ, ಕೋರ್ಟ್, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಇನ್ನು ಮುನಿರತ್ನಗೆ ಮನೆ ಊಟಕ್ಕೆ ಅವಕಾಶ ಮಾಡಿಕೊಡುವಂತೆ ವಕೀಲರು ಕೋರ್ಟ್ಗೆ ಮನವಿ ಮಾಡಿದರು. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಲು ಕೋರ್ಟ್ ಸೂಚಿಸಿದ್ದು, ಒಂದು ವೇಳೆ ಅನುಮತಿ ನೀಡದಿದ್ದರೆ ಕೋರ್ಟ್ನಲ್ಲಿ ಅರ್ಜಿ ಹಾಕಿ ಎಂದು ಹೇಳಿದೆ.
ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎನ್ ಮುನಿರತ್ನ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಿ 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಬಂಧನಕ್ಕೊಳಪಡಿಸಲಾಗಿತ್ತು.
ಇದಕ್ಕೂ ಮೊದಲು ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಮುನಿರತ್ನ ಅವರು ಜೈಲುಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದಿದ್ದರು. ಇನ್ನೇನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು.