ಬೆಂಗಳೂರು : ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಣೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಈ ವಿಚಾರವಾಗಿ ವ್ಯಂಗ್ಯವಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘‘ಕೇರಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು’’ ಎಂದು ಎಕ್ಸ್ ಖಾತೆಯಲ್ಲಿ ಸಂದೇಶವನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸರ್ಕಾರದ 2024-25 ನೇ ಸಾಲಿನ ಪೂರಕ ಅಂದಾಜನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಇದೇ ವೇಳೆ, ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡುವ ಸಲುವಾಗಿ ಎಎಸ್ಡಿಆರ್ಎಫ್ ಮೂಲಕ 10 ಕೋಟಿ ರೂಪಾಯಿ ಹಣಕಾಸು ನೆರವು ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು. ಕರ್ನಾಟಕ ಕಾಂಗ್ರೆಸ್ ಸರಕಾರದ ಈ ನಡೆಗೆ ಈಗ ಆಕ್ಷೇಪ ವ್ಯಕ್ತವಾಗಿದೆ.
‘‘ಕೇರಳದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ!’’ ಎಂದು ಎಕ್ಸ್ ಸಂದೇಶದ ಮೂಲಕ ಅಶೋಕ್ ತಿವಿದಿದ್ದಾರೆ.

ಈ ಹಿಂದೆ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. ಆ ಸಂದರ್ಭದಲ್ಲಿ ವಯನಾಡಿನಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ದಾಳಿ ಮಾಡಿದ್ದ ಆನೆ ಕರ್ನಾಟಕದ ಚಾಮರಾಜನಗರ ಕಡೆಯಿಂದ ಹೋಗಿತ್ತು ಎಂಬ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಆ ನಡೆಯು ಕೂಡ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು ಎಂದು ತಿಳಿದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಸಂಸದರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮೆಚ್ಚಿಸಲು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ತೆರಿಗೆದಾರರ ಹಣ ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ಟೀಕಿಸಿತ್ತು. ಪರಿಹಾರದ ವಿಚಾರ ವಿವಾದಕ್ಕೀಡಾದ ನಂತರ, ಸಂತ್ರಸ್ತನ ಕುಟುಂಬದವರು ಹಣ ಪಡೆಯಲು ನಿರಾಕರಿಸಿದ್ದರು ಎನ್ನಲಾಗಿದೆ.















